ಚುನಾವಣೆಯಲ್ಲಿ ಅಕ್ರಮ ತಡೆಯಲು ವೋಟರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್: ಆರಗ ಜ್ಞಾನೇಂದ್ರ

TTH WEB
Published on

ತೀರ್ಥಹಳ್ಳಿ: ವಿದೇಶಿ ನುಸುಳುಕೋರರಿಂದಾಗಿ ಮತದಾನ ಪ್ರಕ್ರಿಯೆ ಸೇರಿದಂತೆ ದೇಶದ ಆಂತರಿಕ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಈ ಅಪಾಯದ ಬಗ್ಗೆ ಈ ದೇಶದ ಜನತೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಪ್ರಜೆಗಳನ್ನು ಹೊರತು ಪಡಿಸಿ ಉಳಿದವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮತ್ತು ಅಕ್ರಮ ತಡೆಯುವ ಸಲುವಾಗಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮತದಾರರ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ಒಂದು ಆಂದೋಲನದ ರೀತಿ ನಡೆಯಬೇಕಿದೆ ಎಂದರು.

ಕೆಲವು ಅವಕಾಶವಾದಿ ರಾಜಕಾರಣಿಗಳು ಓಟಿನ ಆಸೆಗಾಗಿ ನುಸುಳುಕೋರರನ್ನು ಬೆಂಬಲಿಸುತ್ತಿರುವ ಕಾರಣ ದೇಶದ ಪ್ರಜೆಗಳಲ್ಲದವರೂ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಬೆಳವಣಿಗೆ ದೇಶದ ಭದ್ರತೆ ಹಾಗೂ ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಯತ್ನವಾಗಿದೆ. ನುಸುಳುಕೋರರಿಗೆ ರೇಷನ್ ಮತ್ತು ಆಧಾರ್ ಕಾರ್ಡ್ ಕೊಡಿಸುವ ದೊಡ್ಡಜಾಲವೇ ಇದೆ. ರಾಜ್ಯದಲ್ಲೂ ಸಕ್ರಿಯವಾಗಿರುವ ಈ ಜಾಲವನ್ನು ಬಗ್ಗು ಬಡಿಯಲು ಪೋಲಿಸ್ ಇಲಾಖೆ ಈಗಾಗಲೇ ಕ್ರಮಕೈಗೊಂಡಿದೆ. ಈ ಬಗ್ಗೆ ದೇಶದ ಪ್ರಜೆಗಳು ಕೂಡಾ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net