

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ನಿಧನರಾದಾಗ ದೇಶದ ರಾಜಧಾನಿ ದೆಹಲಿಯಲ್ಲಿ ಅಂತ್ಯಸಂಸ್ಕಾರ ಮತ್ತು ಸ್ಮಾರಕಕ್ಕೆ ಜಾಗ ನೀಡದವರಿಗೆ ದಲಿತ ಪರ ಎಂಬುದಾಗಿ ಹೇಳಿಕೊಳ್ಳಲು ಯಾವ ನೈತಿಕತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಶ್ನಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ ಫೌಂಡೇಷನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಅಂಬೇಡ್ಕರ್ ನಿಧನದ ನಂತರ 35 ವರ್ಷವಾದರೂ ಭಾರತ ರತ್ನವನ್ನು ಕಾಂಗ್ರೆಸ್ ಸರ್ಕಾರ ನೀಡಲಿಲ್ಲ. ಇದರ ನಡುವೆ ಸ್ವಪಕ್ಷೀಯ ನಾಯಕರೇ ಪಡೆದುಕೊಂಡರು. ಕೊನೆಗೆ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದು ಸಂವಿಧಾನ ಶಿಲ್ಪಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಕೊಟ್ಟು ಗೌರವಿಸಿತು ಎಂದರು.
ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂಬುದನ್ನು ಮರೆಯುವಂತಿಲ್ಲ. ಸ್ವತಃ ಇದಕ್ಕಿಂತ ಮೋಸದ ನಿದರ್ಶನ ಅಗತ್ಯವಿದೆಯಾ? ಎಂದು ಸಚಿವರು ಪ್ರಶ್ನಿಸಿದರು.
ವಿಶ್ವ ಸಂಸ್ಥೆಯು ವಿಶ್ವ ಜ್ಞಾನದ ದಿನವನ್ನಾಗಿ ಅಂಬೇಡ್ಕರ್ ಜಯಂತ್ಯುತ್ಸವವನ್ನು ಆಚರಿಸುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಒತ್ತಡ ಕಾರಣ. ಇದರ ನಡುವೆ ಬಿಜೆಪಿ ಸರ್ಕಾರವು ಅಂಬೇಡ್ಕರ್ ಜನಿಸಿದ ಸ್ಥಳ, ಓದಿದ ಸ್ಥಳ, ದೀಕ್ಷೆ ಪಡೆದ ಸ್ಥಳ ಮತ್ತು ಅವರು ಪರಿ ನಿರ್ವಾಣ ಪಡೆದ ಸ್ಥಳಗಳನ್ನು ಗುರುತಿಸಿ, ಪಂಚ ತೀರ್ಥಗಳನ್ನಾಗಿ ಅಭಿವೃದ್ಧಿಪಡಿಸಿದೆ ಎಂದರು.
ಸತತ ನಾಲ್ಕು ದಶಕಗಳಿಂದಲೂ ಎಸ್‌ಸಿ ಸಮುದಾಯ ಒಳ ಮೀಸಲಾತಿ ಕೇಳುತ್ತಿದೆ. ಆದರೆ, ಇದಕ್ಕೆ ದಲಿತರ ಮತ ಪಡೆದು ಅಧಿಕಾರ ಹಿಡಿದವರು ಸ್ಪಂದಿಸಲಿಲ್ಲ. ಆದರೆ, ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ಉಪ ಸಮಿತಿಯ ಕೊಟ್ಟಿದೆ. ಇದರಲ್ಲಿ ಸದಸ್ಯನಾಗಿ ಅಳಿಲು ಸೇವೆಗೈಯಲು ಅವಕಾಶ ಸಿಕ್ಕಿತು ಎಂದು ಹೇಳಿದರು.
2011ರ ಜನಗಣತಿ ವರದಿ ಆಧಾರವಾಗಿ ಎಡಗೈ ಸಮುದಾಯಕ್ಕೆ ನ್ಯಾಯಯುತ ಮೀಸಲಾತಿ ಶೇ.6 ನೀಡಲಾಗಿದೆ. ಬಲಗೈ ಸಮುದಾಯಕ್ಕೂ ಶೇ.5.5 ಮತ್ತು ಸ್ಪೃಶ್ಯ ಸಮುದಾಯಕ್ಕೆ ವರದಿಯಂತೆ ಶೇ.3 ಮಾತ್ರ ಇತ್ತು. ಇದಕ್ಕೆ ಅಧ್ಯಯನ ಮಾಡಿ ಶೇ.4.5ರಷ್ಟು ಮೀಸಲಾತಿ ನೀಡಲಾಗಿದೆ ಎಂದರು.
ಬಿಜೆಪಿ ಮೀಸಲಾತಿ ವಿರೋಧಿಯಾಗಿದ್ದರೆ ಶೇ.15 ಇದ್ದ ಪರಿಶಿಷ್ಟರ ಮೀಸಲಾತಿ ಶೇ.17ಕ್ಕೆ ಹೆಚ್ಚಳ ಮತ್ತು ಶೇ.3ರಷ್ಟಿದ್ದ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಳ ನಿರ್ಧಾರವನ್ನು ಕೈಗೊಳ್ಳುತ್ತಿತ್ತೇ? ಎಂದು ಪ್ರಶ್ನಿಸಿದರು.
ಮಹರ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜೆ.ನಾಗರಾಜ್ ಮಾತನಾಡಿ, ಶೋಷಿತರು ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದರು.
ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖವೀಣೆ ಆಂಜಿನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಬಾಲಕುಂಟಹಳ್ಳಿ ಗಂಗಾಧರ್, ಮಲ್ಲಣ್ಣ, ಭಾರತಮ್ಮ, ಪದ್ಮಮ್ಮ, ರತ್ನಮ್ಮ, ಮುನಿರತ್ನಮ್ಮ, ಗ.ನ. ಅಶ್ವತ್ಥ್, ಅಂದಾರ್ಲಹಳ್ಳಿ ವೆಂಕಟೇಶ್, ಸೀನಪ್ಪ, ಲಾಯರ್ ಮುರಳಿ ಮತ್ತಿತರರು ಇದ್ದರು.