ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಿಸಿ

6Manju8-Web
ಬೆಳಗಾವಿ ನಗರದ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಸಂಜಯ ಪಾಟೀಲ ಸನ್ಮಾನಿಸಿದರು. ಮನೋಹರ ಕಡೋಲ್ಕರ, ಯುವರಾಜ ಜಾಧವ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ ಇದ್ದರು.
Published on

ಬೆಳಗಾವಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಪಕ್ಷ ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿರುವ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ಹಾಗೂ ಕರೊನಾ 3ನೇ ಅಲೆ ತಡೆಯಲು ಸರ್ಕಾರ ಬದ್ಧವಾಗಿದೆ. ಕಾರ್ಯಕರ್ತರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 2 ವರ್ಷ ಉತ್ತಮ ಕೆಲಸ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವ ದಲ್ಲಿಯೂ ರಾಜ್ಯ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಬೆಳಗಾವಿಯಲ್ಲಿ ಪಕ್ಷದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಸರಳ- ಸಜ್ಜನ ರಾಜಕಾರಣಿಯಾಗಿರುವ ಕಾರಜೋಳ ಅವರು ತಮ್ಮ ಕಾರ್ಯಕ್ಷಮತೆಯಿಂದ ಮತ್ತೊಮ್ಮೆ ಸಚಿವರಾಗಿದ್ದಾರೆ. ಅವರೇ ಜಿಲ್ಲಾ ಉಸ್ತುವಾರಿಗಳಾಗಿ ಆಗಮಿಸಿರುವುದು ಶ್ಲಾಘನೀಯ ಎಂದರು. ಮಾಜಿ ಶಾಸಕ ಮನೋಹರ ಕಡೋಲ್ಕರ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಎಫ್.ಎಸ್. ಸಿದ್ದನಗೌಡರ, ವಕ್ತಾರ ಸಂಜಯ ಕಂಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net