

ಹಾಸನ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಗಮನ ಸೆಳೆದ ವಿಚಾರವೆಂದರೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾರು ಇಷ್ಟವಿಲ್ಲ ಎಂದರೆ ಅವರನ್ನು ತಿರಸ್ಕರಿಸಲು ಚುನಾವಣಾ ಆಯೋಗ ನೋಟಾ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿತ್ತು. ಆದರೆ ಹಾಸನದಲ್ಲಿ ಪಕ್ಷೇತರ ಅಭ್ಯರ್ಥಿಗಳಿಗಿಂತ ಅತಿ ಹೆಚ್ಚು ಮತವನ್ನು ನೋಟ ಪಡೆದುಕೊಂಡಿರುವುದು ವಿಶೇಷವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,70,599 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ 6,26,843 ಮತ ಪಡೆದುಕೊಂಡು ಸೋಲು ಕಂಡರೂ ಮೂರನೇ ಸ್ಥಾನದಲ್ಲಿ ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಬಹುಜನ್ ಅವರು 12,074 ಪಡೆದುಕೊಂಡಿದ್ದಾರೆ. ನಂತರದಲ್ಲಿ ನೋಟಾ 8,473 ಮತಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಪಕ್ಷೇತರರಾಗಿ ಮತ್ತು ಹಿಂದುಳಿದ ಪಕ್ಷಗಳಿಂದ ಸ್ಪರ್ಧಿಸಿದ 12 ಅಭ್ಯರ್ಥಿಗಳು ಕೂಡ ನೋಟಾ ಪಡೆದ ಮತಗಳಿಗಿಂತಲೂ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಅತಿ ಕಡಿಮೆ ಮತವನ್ನು ಕೆ.ಆರ್. ಗಂಗಾಧರ್ ಅವರು 735 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಪ್ರಜ್ವಲ್ ರೇವಣ್ಣ ಅವರು ಅಂಚೆ ಮತದಾನದಲ್ಲಿ 3803 ಮತಗಳನ್ನು ಪಡೆದರೆ, ಶ್ರೇಯಸ್ ಪಟೇಲ್ ಅವರು 2714 ಮತಗಳನ್ನು ಪಡೆದಿದ್ದಾರೆ.
ಮೈತ್ರಿಯಲ್ಲಿ ಮತ್ತೆ ಪ್ರಜ್ವಲಿಸದ ಪ್ರಜ್ವಲ್:
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶ ಮಾಡಿದ್ದರು. ಇದೀಗ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಎರಡನೇ ಬಾರಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಎಸ್‌ಐಟಿ ವಶದಲ್ಲಿರುವ ಪ್ರಜ್ವಲ್ ಈ ಬಾರಿ ಚುನಾವಣೆಯಲ್ಲಿ ಸೋಲು ಕಾಣುವ ಮೂಲಕ ಜೆಡಿಎಸ್‌ಗೆ ತೀವ್ರ ಆಘಾತ ಉಂಟು ಮಾಡಿದೆ. ನ್ಯಾಯಾಲಯದಲ್ಲಿ ತೀರ್ಪು ಏನೇ ಬಂದರೂ ಕೂಡ ಜನ ಮಾತ್ರ ತಮ್ಮ ತೀರ್ಪು ನೀಡಿದ್ದಾರೆ. ಜಿಲ್ಲೆಯಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ ಮತ್ತು ನ್ಯಾಯ ದೇವತೆಯ ಆದೇಶಕ್ಕಿಂತ, ಜನರೇ ಮೊದಲು ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಸಾಮ್ರಾಜ್ಯಕ್ಕೆ ಪೆಟ್ಟು:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಸನದಿಂದ ಸ್ಪರ್ಧಿಸಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ, ಪ್ರಧಾನಿಯಾಗುವವರೆಗೂ ಕೂಡ ಜಿಲ್ಲೆಯ ಜನರು ಆಶೀರ್ವಾದ ಮಾಡಿದ್ದರು. ಅದಲ್ಲದೆ ಜಿಲ್ಲೆಯನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಳ್ಳುವ ಮೂಲಕ ಸಾಮ್ರಾಜ್ಯ ಸ್ಥಾಪಿಸಿದರು. ನಂತರದಲ್ಲಿ ಅವರ ಪುತ್ರ ಎಚ್.ಡಿ. ರೇವಣ್ಣ ಇಡೀ ಹಾಸನವನ್ನು ತನ್ನ ಕಬ್ಜದ ರೀತಿ ಇಟ್ಟುಕೊಂಡಿದ್ದರು. ಎಲ್ಲಾ ಸಾಮ್ರಾಜ್ಯಕ್ಕೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ತೀವ್ರ ಪೆಟ್ಟು ನೀಡಿತು. ಅಲ್ಲದೆ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಉಂಟುಮಾಡಿದೆ.