ಚುನಾವಣೆಗಳಿಗೆ ಬಿಜೆಪಿ ಸಿದ್ಧತೆ ಶುರು: ಮಂಡ್ಯದಲ್ಲಿ 25ಕ್ಕೆ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ; ನಳಿನ್ ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ಭಾಗಿ

Nalin Kumar
ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ ಕಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಿ.ಜಿ.ಪಾಟೀಲ್, ಎನ್.ರವಿಕುಮಾರ್, ಸುನೀಲ್ ವಲ್ಲ್ಯಾಪುರೆ, ದತ್ತಾತೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೆಲ್ಕೂರ, ಶಶೀಲ್ ನಮೋಶಿ, ಬಸವರಾಜ ಮತ್ತಿಮೂಡ ಇತರರಿದ್ದರು.
Published on

ಬೆಂಗಳೂರು: ಮೂರು ಮಹಾನಗರ ಪಾಲಿಕೆಗಳು ಒಳಗೊಂಡು ಸಾಲುಗಟ್ಟಿ ಬರಲಿರುವ ಚುನಾವಣೆಗಳಿಗೆ ಬಿಜೆಪಿ ಸಿದ್ಧತೆ ಚುರುಕುಗೊಳಿಸಿದ್ದು, ವರ್ಚಸ್ಸು ಹಾಗೂ ಸಂಘಟನಾ ಬಲ ಹೆಚ್ಚಿಸಿಕೊಳ್ಳಲು ಪ್ರಾಶಸ್ಱ ನೀಡಿದೆ. ಮಂಡ್ಯದಲ್ಲಿ ಆ.25ರಂದು ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ನಿಗದಿಯಾಗಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ನೀತಿ-ನಿರ್ಧಾರಗಳು ಮತ್ತು ಸಂಘಟನಾ ಚಟುವಟಿಕೆಗಳ ಪ್ರಗತಿ ಅವಲೋಕಿಸಲಿದೆ.

ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆಗೆ ಮಾಡಿಕೊಂಡಿರುವ ತಯಾರಿ ಪರಾಮಶಿಸಲಿದೆ. ಅಭ್ಯರ್ಥಿಗಳ ಆಯ್ಕೆ, ಸಭೆಗಳು, ಪ್ರಚಾರ ಕಾರ್ಯಕ್ರಮಗಳು, ಮುಖಂಡರು ಮತ್ತು ಕಾರ್ಯಕರ್ತರ ಜತೆಗೂಡಿ ಯೋಜನಾ ಬದ್ಧ ಕೆಲಸಕ್ಕಾಗಿ ಉಸ್ತುವಾರಿಗಳಿಗೆ ಜವಾಬ್ದಾರಿ ಒಪ್ಪಿಸಲಾಗಿದೆ. ಸಚಿವ, ಸಂಸದ-ಶಾಸಕರು ಹಾಗೂ ಪ್ರಮುಖರನ್ನು ಒಳಗೊಂಡ ತಂಡವು ಉಸ್ತುವಾರಿ ಹೊಣೆ ಹೊತ್ತ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯಾರಂಭಿಸಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳನ್ನು ಉಳಿಸಿಕೊಳ್ಳುವ ಜತೆಗೆ ಕಲಬುರಗಿ ಪಾಲಿಕೆಯನ್ನು ವಶಕ್ಕೆ ಪಡೆಯುವ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸತ್ವ ಪರೀಕ್ಷೆಗೆ ಸನ್ನದ್ಧ: ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳು ಸರ್ಕಾರ ಮತ್ತು ಪಕ್ಷದ ಪಾಲಿಗೆ ಸತ್ವ ಪರೀಕ್ಷೆಯಾಗಲಿದೆ. ಪೇಜ್ ಪ್ರಮುಖರು, ಬೂತ್​ವುಟ್ಟದಿಂದ ಹಿಡಿದು ಜಿಲ್ಲಾ ಹಂತದವರೆಗೆ ಸಂಘಟನೆ ಬಲವರ್ಧನೆ, ಕಾರ್ಯಕರ್ತರಲ್ಲಿ ಹುರುಪು ತುಂಬುವ ಚಟುವಟಿಕೆಗಳ ಪ್ರಗತಿ ಪರಾಮರ್ಶೆಯಾಗಲಿದೆ. ವಿಧಾನ ಪರಿಷತ್​ನ ಸ್ಥಳೀಯ ಗ್ರಾಮೀಣ ಸಂಸ್ಥೆಗಳ 25 ಕ್ಷೇತ್ರಗಳಿಗೆ ವರ್ಷಾಂತ್ಯಕ್ಕೆ ಚುನಾವಣೆ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳಿವೆ. ಸೇವೆಯೇ ಸಂಘಟನೆ ಕಾರ್ಯಗಳು ಜನರ ವಿಶ್ವಾಸ ಗಳಿಸುವುದಕ್ಕೆ ನೆರವಾಗಿವೆ. ಅದೇ ಕಾಲಕ್ಕೆ ತಳಹಂತದ ಕಾರ್ಯಕರ್ತರನ್ನು ಸಕ್ರಿಯವಾಗಿಡಲು ಅನುಕೂಲವಾಗಿದೆ. ಕರೊನಾ ಮೂರನೇ ಅಲೆ ಎದುರಿಸುವುದಕ್ಕೆ ಸರ್ಕಾರದ ಜತೆಗೆ ಕೈಜೋಡಿಸುವುದಕ್ಕೆ ಆರೋಗ್ಯ ಸ್ವಯಂ ಸೇವಾ ಕಾರ್ಯಕರ್ತರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಜನರಲ್ಲಿ ಅರಿವು ಮೂಡಿಸಿ ಆತ್ಮಸ್ಥೈರ್ಯ ತುಂಬುವ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು, ಕಾರ್ಯಕ್ರಮಗಳ ಮಾಹಿತಿ ಹಂಚಿದ ಕುರಿತು ಆಯಾ ಜಿಲ್ಲೆಗಳು ಸಲ್ಲಿಸಿದ ವರದಿಗಳು ಸಭೆಯಲ್ಲಿ ಪ್ರಸ್ತಾಪವಾಗಲಿವೆ.

ವರಿಷ್ಠರಿಗೆ ಸಂತೃಪ್ತಿ: ಆಡಳಿತಕ್ಕೆ ವೇಗ, ಹೊಸತನದ ಸ್ಪರ್ಶ, ಜನಾನುರಾಗಿ ಕಾರ್ಯಕ್ರಮಗಳನ್ನು ನೀಡಬೇಕೆಂಬ ಜಾಡಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಜ್ಜೆಯಿಟ್ಟಿದ್ದು, ವರಿಷ್ಠರಿಗೆ ಸಂತೃಪ್ತಿ ತಂದಿದೆ. ರೈತರ ಮಕ್ಕಳಿಗೆ ಶಿಷ್ಯ ವೇತನ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನಗಳ ಏರಿಕೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ ಸ್ಥಾಪನೆ, ಸಚಿವರಿಗೆ ತುರ್ತು ಜವಾಬ್ದಾರಿ ಹಂಚಿಕೆ ಮುಂತಾದ ನಿರ್ಧಾರಗಳ ಬಗ್ಗೆ ಮಂಡ್ಯ ಸಭೆ ಪರಿಶೀಲಿಸಲಿದೆ.

ಉತ್ತಮ ನೀತಿ-ನಿರ್ಧಾರಗಳತ್ತ ಜನರ ಗಮನಸೆಳೆದು, ಪಕ್ಷದ ಪರ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಸಚಿವರು, ಸಂಸದ-ಶಾಸಕರು ಮಾಡಿರುವ ಪ್ರಯತ್ನಗಳನ್ನು ತಿಳಿದುಕೊಳ್ಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಕರೊನಾ ಪರಿಣಾಮಕಾರಿ ನಿಯಂತ್ರಣ, ಅತಿವೃಷ್ಟಿ ಹಾಗೂ ಪ್ರವಾಹಬಾಧಿತ ಜಿಲ್ಲೆಗಳಲ್ಲಿ ತ್ವರಿತ ಪರಿಹಾರ ಕ್ರಮಗಳಿಗೂ ಸರ್ಕಾರ ಆದ್ಯತೆ ನೀಡಿರುವುದು ಸಮಾಧಾನ ತಂದಿದೆ. ಮುಂಬರುವ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವುದಕ್ಕೆ ಬೊಮ್ಮಾಯಿ ಸಂಪುಟ, ಶಾಸಕರು ಅಣಿಯಾಗುವ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಮೋದಿ ದಿಟ್ಟ ಕ್ರಮಗಳಿಂದ ಕಾಂಗ್ರೆಸ್​ಗೆ ನಡುಕ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದಕ್ಷ, ಪ್ರಾಮಾಣಿಕ ನಡೆ ಹಾಗೂ ಸಾಮಾಜಿಕ ನ್ಯಾಯ ಪಾಲನೆ, ಅಭಿವೃದ್ಧಿ ವಿಚಾರದಲ್ಲಿ ತೆಗೆದುಕೊಂಡಿರುವ ದಿಟ್ಟ ಕ್ರಮಗಳು ಕಾಂಗ್ರೆಸ್​ನಲ್ಲಿ ನಡುಕ ಹುಟ್ಟಿಸಿದೆ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ. ದಲಿತ ಪರ ಕಾಳಜಿ, ದಲಿತೋದ್ಧಾರ, ಸಾಮಾಜಿಕ ನ್ಯಾಯವೆಂದು ಬಾಯಿ ಮಾತಿನಲ್ಲೇ ಹೇಳಿ ಕಾಲ ಕಳೆದವರಿಗೆ ಕೇಂದ್ರ ಸರ್ಕಾರದ ನೈಜ ನಿರ್ಧಾರಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಮತ್ತದೆ ಸುಳ್ಳುಗಳನ್ನು ಬಿತ್ತುತ್ತಾ ಜನರ ದಾರಿ ತಪ್ಪಿಸಲು ಹವಣಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮೋದಿಯವರ ಕಾರ್ಯಕ್ಷಮತೆ, ಎಲ್ಲರನ್ನು ಒಳಗೊಂಡ ಅಭಿವೃದ್ಧಿ, ಚುರುಕಿನ ಕ್ರಮಗಳಿಂದಾಗಿ ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಮತ್ತೆ ಮೂಲೆಗೆ ಸೇರಲಿದ್ದೇವೆ ಎಂಬ ಆತಂಕದಲ್ಲಿರುವ ಕಾಂಗ್ರೆಸ್ ನಾಯಕರು ಈಗಿನಿಂದಲೇ ಅಪಪ್ರಚಾರಕ್ಕೆ ಮುಂದಾಗಿದ್ದು, ಜನರೇನು ದಡ್ಡರಲ್ಲ. ಸಾಮಾಜಿಕ, ರಾಜಕೀಯ ಪ್ರಜ್ಞೆ ಅವರಲ್ಲಿ ಆಳವಾಗಿ ಬೆಳೆದು ಹೆಮ್ಮರವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net