

ಚಿತ್ರದುರ್ಗ: ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನನ್ನ ಗುರಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ 17,703 ಮತಗಳನ್ನು ಪಡೆದು ಜಯ ಸಾಧಿಸಿರು ಅವರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಯುವ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಕಾರ್ಯಕರ್ತರು ಮರು ಆಯ್ಕೆಗೆ ಶ್ರಮಿಸಿದ್ದಾರೆ. ಮುಂದೆ ಎದುರಾಗಲಿರುವ ಜಿಪಂ, ತಾಪಂ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಚಿತ್ರದುರ್ಗ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತೇನೆ ಎಂದರು.
ಪಕ್ಷದ ಪಡೆ ಸಕ್ರಿಯವಾಗಿ ಕೆಲಸ ಮಾಡಲಿದೆ. ಎಲ್ಲರ ಸಹಕಾರ, ಪ್ರೀತಿ, ವಿಶ್ವಾಸ,ನೆರವಿನೊಂದಿಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಕ್ತಿ ತುಂಬಲಾಗುವುದು ಎಂದು ತಿಳಿಸಿದರು.
ಡಿಸಿಸಿ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ, ಉಲ್ಲಾಸ್ ಯುವ ಕಾರ್ಯಕರ್ತರ ಮೂಲಕ ಪಕ್ಷಕ್ಕೆ ಬಲ ತಂದುಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಪಕ್ಷದ ಅಸ್ತಿಯನ್ನಾಗಿ ರೂಪಿಸಬೇಕಿದೆ ಎಂದರು. ಪಕ್ಷ ಹಾಗೂ ಯುವ ಘಟಕದ ಮುಖಂಡರು ಇದ್ದರು.
---