

ಚಿತ್ರದುರ್ಗ: ದೇಶ, ರಾಜ್ಯದ ಮುಂಚೂಣಿ ಪಕ್ಷಗಳ ಜನವಿರೋಧಿ ನೀತಿಗಳ ವಿರುದ್ಧ ಕರ್ನಾಟಕ ಸರ್ವೋದಯ ಕರ್ನಾಟಕ ಪಕ್ಷವನ್ನು ಪ್ರಬಲವಾಗಿ ಸಂಘಟಿಸ ಲಾಗುವುದೆಂದು ಅಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೇಡಿಕೆ ಈಡೇರಿಸಿ ಲ್ಲ. ರೈತ ವಿರೋಧಿ ಕಾನೂನುಗಳ ಮೂಲಕ ಕೃಷಿ ಮಾರುಕಟ್ಟೆ, ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲಾಗುತ್ತಿದೆ. ರೈತರ,ದಲಿತರ, ಕಾರ್ಮಿಕರ, ಅಲ್ಪಸಂಖ್ಯಾತರ, ಮಹಿಳೆಯರ ಹಾಗೂ ಮಕ್ಕಳ ಆಶೋತ್ತರಗಳನ್ನು ಈಡೇರಿಸಲು ಎಲ್ಲ ಪಕ್ಷಗಳು ವಿಫಲವಾಗಿವೆ. ನಮ್ಮ ಪಕ್ಷ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧಿಸಲಿದೆ ಎಂದರು.
ಜಾತಿ, ಧರ್ಮಗಳ ಸಂಘರ್ಷ, ಶ್ರೀರಾಮ ಮಂದಿರದ ದೇಣಿಗೆ ಲೂಟಿ, ಉದ್ಯಮಿಗಳ 40 ಲಕ್ಷ ಕೋಟಿ ರೂ. ಸಾಲಮನ್ನಾದಿಂದ ದುಡಿಯುವ ವರ್ಗ ಸಾಲದ ಕೂಪಕ್ಕೆ ಸಿಲುಕಿದೆ. ಕಾಂಗ್ರೆಸ್ ಕೂಡ ಭ್ರಷ್ಟಾಚಾರ ನಡೆಸುತ್ತಿದೆ. ವಾಲ್ಮೀಕಿ ನಿಗಮ, ಮುಡಾ ಹಗರಣಗಳು,ಫಸಲ್‌ಬಿಮಾ ಯೋಜನೆಯಲ್ಲಿ ಗೋಲ್‌ಮಾಲ್ ಆಗಿದೆ. ದಲಿತ, ರೈತ, ಕಾರ್ಮಿಕ ಚಳವಳಿ ಹಾಗೂ ಪ್ರಗತಿಪರರ ಸಂಘಟನೆಗಳೊಂದಿಗೆ ರಾಜ್ಯದಲ್ಲಿ ಗುಣಾತ್ಮಕ ರಾಜಕಾರಣದ ನಡೆಸುವುದು ಪಕ್ಷದ ಉದ್ದೇಶವಾಗಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂಯುಕ್ತ ಕಿಸಾನ್ ಮೋರ್ಚಾ ಕರೆಮೇರೆಗೆ, ಕ್ವಿಟ್‌ಇಂಡಿಯಾ ಮೂವ್‌ಮೆಂಟ್ ಅಂಗವಾಗಿ ಸೆಪ್ಟೆಂಬರ್ 9 ರಂದು ‘ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಪ್ರತಿಭಟನೆ ನಡೆಯಲಿದೆ.
ವಯನಾಡು ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಸಂಡೂರಲ್ಲಿ ಸೆ.4ರಂದು ಎಸ್.ಆರ್.ಹಿರೇಮಠ್ ನೇತೃತ್ವದೊಂದಿಗೆ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಲಾಗುವುದು. ರೈತ ಸಂಘವನ್ನು ಗ್ರಾಮಮಟ್ಟದಿಂದ ಮರು ಸಂಘಟಿಸಲಾಗುವುದು ಎಂದರು.
ಕೆ.ಪಿ.ಭೂತಯ್ಯ, ಅಂಜದ್‌ಪಾಷ, ಪ್ರೊ.ಜೆ.ಯಾದವರೆಡ್ಡಿ, ಹೊರಕೇರಪ್ಪ, ಶಿವರಾಜ್ ರೇವಣಸಿದ್ದಯ್ಯ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಗೋಪಾಲ್ ಪಾಪೇಗೌಡ, ಶಂಕರೇಗೌಡ ಇತರರು ಇದ್ದರು.