

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣಾ ಘಟಕ ತೆರವಿಗೆ ಆಗ್ರಹಿಸಿ ನವಬೆಂಗಳೂರು ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಮೇಲ್ಮನೆ ಚುನಾವಣೆ ಬಳಿಕ ಶಾಶ್ವತ ಪರಿಹಾರ ಕಲ್ಪಿಸುವ ಜನಪ್ರತಿನಿಧಿಗಳ ಆಶ್ವಾಸನೆ ಭರವಸೆಯಾಗಿಯೇ ಉಳಿದಿದೆ.
ಕಸ ಘಟಕದಿಂದ ಬರುವ ಲಿಚೆಟ್ ಅಂತರ್ಜಲ ಸೇರುತ್ತಿದೆ. ಇದರಿಂದಾಗಿ ಕುಡಿಯುವ ನೀರು ವಿಷವಾಗಿದೆ ಎಂಬ ಕಾರಣದಿಂದ ಹೋರಾಟಗಾರರು ಪ್ರತಿಭಟನೆ ತೀವ್ರಗೊಳಿಸಿದ್ದರು. ಇದರ ನಡುವೆ ಘಟಕ ಮುಚ್ಚಲು ಸಾಧ್ಯವಿಲ್ಲ. ಪರ್ಯಾಯವಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಯನ್ವಯ ಘಟಕ ನಡೆಸಬೇಕು. ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡಬೇಕು ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ. ಹೋರಾಟಗಾರರು ಹಾಗೂ ಸರ್ಕಾರದ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆ ದೂರವಾಗಿಯೇ ಇದೆ.
ಪ್ರತಿಭಟನೆ ಹತ್ತಿಕ್ಕಲು ಕಸರತ್ತು: ಅನಿರ್ದಿಷ್ಟಾವಧಿ ಹೋರಾಟ ಆರಂಭವಾಗಿ 12 ದಿನಗಳ ಬಳಿಕ ಅನೇಕ ಪ್ರಹಸನಗಳು ನಡೆದವು. ಉಸ್ತುವಾರಿ ಸಚಿವರು ಸೇರಿ ಬಿಬಿಎಂಪಿ ಆಯುಕ್ತರು, ಸ್ಥಳೀಯ ಶಾಸಕರು ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಿದರು. ಆದರೂ ತಾರ್ಕಿಕ ಪರಿಹಾರ ಗಗನಕುಸುಮವಾಗಿಯೇ ಉಳಿದಿದೆ. ಒಮಿಕ್ರಾನ್ ಮಾರ್ಗಸೂಚಿ ಅಸ ಪ್ರಯೋಗಿಸಿ ಪ್ರತಿಭಟನೆ ತಣ್ಣಗಾಗಿಸುವ ಪ್ರಯತ್ನವೂ ನಡೆಯಿತು. ಮೇಲ್ಮನೆ ಚುನಾವಣೆ ಕಾರಣದಿಂದ ಪ್ರತಿಭಟನಾ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೋರಾಟಗಾರರ ಕೈಕಟ್ಟಿ ಹಾಕುವಲ್ಲಿ ಸರ್ಕಾರ ಯಶಸ್ವಿಯಾಯಿತು.
ಉದ್ವಿಗ್ನ ಪರಿಸ್ಥಿತಿಗೆ ದಾರಿ!: ಪ್ರತಿಭಟನೆ ಕಾವು ಬೂದಿಮುಚ್ಚಿದ ಕೆಂಡದಂತೆಯೇ ಇದೆ. ಸರ್ಕಾರದ ಬಲಪ್ರಯೋಗ ಹೋರಾಟಗಾರರ ಎದೆಗುಂದಿಸಿಲ್ಲ. ಪ್ರತಿನಿತ್ಯ ಪಾಳಿಯಂತೆ ಪಹರೆ ನಡೆಸುತ್ತಿದ್ದಾರೆ. ಇದರ ನಡುವೆ ಆಗಾಗ ಲಾರಿಗಳು ಕಸ ಸುರಿಯಲು ಬರುತ್ತಿದ್ದು, ಅವುಗಳನ್ನು ವಾಪಸ್ ಕಳುಹಿಸುತ್ತಿದ್ದಾರೆೆ. ಆದರೆ ಮತ್ತೆ ಸರ್ಕಾರ ಯಾವಾಗ ಪೊಲೀಸ್ ಬಲಪ್ರಯೋಗಕ್ಕೆ ಮುಂದಾಗುತ್ತದೋ ಎಂಬ ಆತಂಕ ಕಾಡುತ್ತಿರುವುದು ಸುಳ್ಳಲ್ಲ. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.
ಹೋರಾಟಕ್ಕೆ ಮತ್ತಷ್ಟು ಬಲ: ಕಸ ಘಟಕದ ಸುತ್ತಮುತ್ತಲ ಹಳ್ಳಿಗಳ ಕೊಳವೆಬಾವಿಗಳಲ್ಲಿ ಕಲುಷಿತ ನೀರು ಬರುತ್ತಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಇಲ್ಲಿನ ವಾಸ್ತವ ಪರಿಸ್ಥಿತಿ ತಿಳಿಸುತ್ತಿದೆ. ಈ ಭಾಗದ ಮೂರ‌್ನಾಲ್ಕು ಪಂಚಾಯಿತಿ ವ್ಯಾಪ್ತಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಅಧಿಕಾರಿಗಳು ಕೊಟ್ಟಿರುವ ಅಧ್ಯಯನ ವರದಿ ಪ್ರತಿಭಟನಾಕಾರರ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ವಿಷದ ನೀರು ಕುಡಿದು ಸಾಯುವ ಪರಿಸ್ಥಿತಿ ನಮಗ್ಯಾಕೆ ಎಂದು ಅವರೆಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಾಂತ ರೀತಿಯಿಂದ ಹೋರಾಡುತ್ತಿದ್ದೇವೆ. ಕಸ ಘಟಕ ತೆರವುಗೊಳಿಸುವವರೆಗೆ ವಿಶ್ರಮಿಸುವುದಿಲ್ಲ. ಗ್ರಾಮೀಣ ಭಾಗವನ್ನು ಬೆಂಗಾಡು ಮಾಡಲು ಹೊರಟಿರುವ ಬಿಬಿಎಂಪಿ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ಸಾರಥಿ ಸತ್ಯಪ್ರಕಾಶ್, ನವಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ