ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ

Pranavanand Swamiji
Published on

ಕಲಬುರಗಿ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದ್ದು, ಅನ್ಯಾಯವನ್ನು ಖಂಡಿಸಿ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕರದಾಳ ಬ್ರಹ್ಮಶ್ರೀ ನಾರಾಯಣ ಗುರುಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮೂರು ವರ್ಷದಿಂದ ಸಮುದಾಯದ ವಿವಿಧ ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಮೊದಲು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಮ್ಮ ಹೋರಾಟಕ್ಕೆ ಸಹಕಾರ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಸಮಾಜವನ್ನು ಮರೆತು ಅನ್ಯಾಯ ಮಾಡುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸಮುದಾಯದ ಬೇಡಿಕೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಲ್ಯಾಣ ಕರ್ನಾಟಕದಲ್ಲಿನ ಏಳು ಜಿಲ್ಲೆಗಳಲ್ಲಿ ಸಮುದಾಯದ ಮುಖಂಡರ, ಪ್ರಮುಖರ ಸಭೆ ನಡೆಸಿ, ಏ.೨೬ ಅಥವಾ ೨೭ರಂದು ಚುನಾವಣೆ ಬಹಿಷ್ಕಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಸರ್ಕಾರ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ರೂಪಾಯಿಯನ್ನು ನೀಡಿಲ್ಲ. ಈಡಿಗರ ಅಭಿವೃದ್ಧಿಗೆ ನಿಗಮಕ್ಕೆ ಸುಮಾರು ೫೦೦ ಕೋಟಿ ರೂ. ನೀಡಬೇಕು. ಈಡಿಗ ಸಮುದಾಯದ ಕುಲಕಸುಬು ಕಳೆದುಕೊಂಡು ರಾಜ್ಯಾದ್ಯಂತ ೧.೫ ಲಕ್ಷ ಜನ ನಿರುದ್ಯೋಗಿಗಳಾಗಿದ್ದಾರೆ. ಕುಲಕಸುಬು ವಾಪಸ್ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಅದು ಸಾಧ್ಯವಾಗದಿದ್ದರೆ ಕಸುಬು ಕಳೆದುಕೊಂಡವರಿಗೆ ಎರಡು ಎಕರೆ ಭೂಮಿ ನೀಡುವಂತೆ ಮನವಿ ಮಾಡಲಾಗಿತ್ತು. ಸೂಕ್ತ ಭರವಸೆ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾದೇವ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net