

ತ್ಯಾಮಗೊಂಡ್ಲು: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದ ತ್ಯಾಮಗೊಂಡ್ಲು ಗ್ರಾಪಂಗೆ ಚುನಾವಣಾ ಆಯೋಗ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿದೆ.
ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣೆ ಬಹಿಷ್ಕರಿಸುವ ಕುರಿತು ಚರ್ಚಿಸಲು ಗ್ರಾಮದ ವಾಸವಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಪ್ರಾಥಮಿಕ ಹಂತದ ಸಭೆ ನಡೆಯಿತು. ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ಕುರಿತು ಚರ್ಚೆಗಳು ನಡೆದವು.
ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್.ಹನುಮಂತರಾಜು ಮಾತನಾಡಿ, ಕಳೆದ ಬಾರಿ ಚುನಾವಣೆ ಬಹಿಷ್ಕರಿಸಿದ ಬಳಿಕ ರಾಜಕೀಯ ಮುಖಂಡರು, ಅಧಿಕಾರಿಗಳನ್ನು ಭೇಟಿ ಮಾಡಿ, ಪಟ್ಟಣ ಪಂಚಾಯಿತಿಯಾಗಿ ಬಡ್ತಿ ನೀಡುವಂತೆ ಒತ್ತಾಯಿಸಲಾಗಿದೆ. ಈ ಕುರಿತ ಕಡತ ನಗರಾಭಿವೃದ್ಧಿ ಇಲಾಖೆಯಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸರ್ಕಾರದ ಗಮನಕ್ಕೆ ತಂದು ಆದೇಶ ಹೊರಡಿಸಬೇಕಿದೆ. ಆದ್ದರಿಂದ ಈಗಿನ ಚುನಾವಣೆಯನ್ನೂ ಬಹಿಷ್ಕರಿಸಬೇಕು. ಪಟ್ಟಣ ಪಂಚಾಯಿತಿ ಆದರೆ ಹೆಚ್ಚುವರಿಯಾಗಿ ಸಿಗುವ ಅನುದಾನ, ಪಟ್ಟಣದ ಅಭಿವೃದ್ಧಿ, ಸ್ವತ್ತುಗಳ ಮೌಲ್ಯವೃದ್ಧಿ, ಸುತ್ತಲಿನ ಜಮೀನುಗಳನ್ನು ಹಸಿರು ವಲಯದಿಂದ ಹಳದಿ ವಲಯಕ್ಕೆ ಬದಲಾವಣೆ ಮತ್ತಿತರ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ರಕ್ಷಿತ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ನಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಪ್ರತಿಬಾರಿ ನಾವೇ ಅವರ ಬಳಿ ಹೋಗಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಆದ್ದರಿಂದ ತ್ಯಾಮಗೊಂಡ್ಲು ಪಟ್ಟಣದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿ ಎಲ್ಲರಿಗೂ ಬಿಸಿ ಮುಟ್ಟಿಸಬೇಕು. ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು 4 ದಿನ ಬಂದ್ ಮಾಡಬೇಕು ಎಂದು ಸಲಹೆ ನೀಡಿದರು.
ಬಹಿಷ್ಕಾರಕ್ಕೆ ಹೆಚ್ಚಿದ ಒಲವು: 2021ರ ಜನಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ. ನಮ್ಮ ಪಟ್ಟಣದ ಜನಸಂಖ್ಯೆ ಹೆಚ್ಚಿಗೆ ಇರುವುದರಿಂದ ಕಾಯ್ದೆ ಪ್ರಕಾರ ಪಪಂ ಮಾಡಲೇಬೇಕು. 2ನೇ ಬಾರಿಯೂ ಚುನಾವಣೆಗೆ ಸ್ಪರ್ಧಿಸದೆ ಬಹಿಷ್ಕಾರ ಹಾಕಬೇಕು. ಆಗ ಸರ್ಕಾರಕ್ಕೆ ನಮ್ಮ ಕಡೆಯಿಂದ ಬಲವಾದ ಸಂದೇಶ ರವಾನೆಯಾಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಮನಸ್ಸು ಮಾಡುತ್ತದೆ ಎಂದು ಸರ್ವ ಪಕ್ಷಗಳ ಮುಖಂಡರು ಮತ್ತು ಗ್ರಾಮಸ್ಥರು ನಿರ್ಣಯ ಕೈಗೊಂಡರು.
ವರ್ತಕರ ಸಂಘದ ಅಧ್ಯಕ್ಷ ಟಿ.ಎಸ್.ಮಂಜುನಾಥ್, ಜಿಪಂ ಮಾಜಿ ಸದಸ್ಯ ಕುಮಾರಸ್ವಾಮಿ ಮೊದಲಿಯಾರ್, ಮುಖಂಡ ಗಂಗಬೈರಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ.ಎಸ್.ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಟಿ.ಎಸ್. ಜಗದೀಶ್,ಟಿ.ವಾಸುದೇವ್, ಸಾದತ್ ಉಲ್ಲಾ, ಗ್ರಾಪಂ ಮಾಜಿ ಸದಸ್ಯರಾದ ಪಿ.ಎನ್.ಸುಜಿತ್ ಕುಮಾರ್, ಸುಂದರರಾಜ್ ಮೊದಲಿಯಾರ್, ಸಿ.ಎಲ್.ಜಗದೀಶ್‌ಪ್ರಸಾದ್, ಡೇರಿ ಮಾಜಿ ಅಧ್ಯಕ್ಷ ಎಸ್.ಶಂಕರಪ್ಪ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸಿ.ಅಶ್ವತ್ಥ್‌ಕುಮಾರ್ ಮತ್ತಿತರರು ಇದ್ದರು.