

ಮೈಸೂರು: ಸಹಕಾರ ಸಂಘದ ಆಡಳಿತ ನಡೆಸುವವರಿಗಿಂತ ಹೆಚ್ಚಿನ ಜವಾಬ್ದಾರಿ ಚುನಾವಣೆ ನಡೆಸುವವರ ಮೇಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವೈ. ಭೈರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ನಗರದ ಚಾಮರಾಜ ಜೋಡಿ ರಸ್ತೆಯ ಸಹಕಾರ ಭವನದಲ್ಲಿ ಮೈಸೂರು ನಗರ ಮತ್ತು ತಾಲೂಕಿನಲ್ಲಿ ಚುನಾವಣೆ ನಡೆಸುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷವೂ ಕೂಡ ಸಹಕಾರ ಸಂಸ್ಥೆಗಳ ಚುನಾವಣೆ ಸಿದ್ಧತೆಗೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ಅನುಕೂಲವಾಗಲಿದೆ. 2025ರಲ್ಲಿ ಸಾಕಷ್ಟು ಸಹಕಾರ ಚುನಾವಣೆ ನಡೆಯಲಿವೆ. ಕಾಯ್ದೆ ಜಾರಿಯಲ್ಲಿದ್ದರೂ ಕೆಲವು ವರ್ಷಗಳ ಹಿಂದೆ ಸಹಕಾರ ಚುನಾವಣೆ ಮುಂಚಿತವಾಗಿ 195 ದಿನದ ಉಚಿತ ನೋಟಿಸ್ ನೀಡದೇ ಚುನಾವಣೆ ನಡೆಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸಹಕಾರ ಚುನಾವಣೆ ಕಾಯ್ದೆ ಸಾಕಷ್ಟು ಕಟ್ಟುನಿಟ್ಟಾಗಿ ಕಾರ್ಯನಿರ್ವಹಣೆಯಾಗುತ್ತಿದೆ ಎಂದರು.
ಹಾಸನ ಸಹಕಾರ ಇಲಾಖಾ ಅಧಿಕಾರಿ ಜಗದೀಶ್ ಅವರು ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಸಹಕಾರ ಸಂಘಗಳ ಚುನಾವಣಾ ಪೂರ್ವಸಿದ್ಧತೆ ಮತ್ತು ಮತದಾರರ ಪಟ್ಟಿ ತಯಾರಿಸುವ ಕ್ರಮ ಬಗ್ಗೆ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯ ಜವಾಬ್ದಾರಿ ಮತ್ತು ಕರ್ತವ್ಯಗಳು ಹಾಗೂ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಲ್ಲಿನ ಇತ್ತೀಚಿನ ತಿದ್ದುಪಡಿಗಳು ಎಂಬ ವಿಷಯ ಕುರಿತು ಕೆಐಸಿಎಂ ಮೂಡುಬಿದರೆ ಪ್ರಾಂಶುಪಾಲ ಡಾ.ಎಂ ವಿಶ್ವೇಶ್ವರಯ್ಯ ಮಾತನಾಡಿದರು.
ಮೈಸೂರು ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಚ್ ಮನೋಜ್ ಕುಮಾರ್, ಕೆಐಸಿಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಮಹದೇವಪ್ಪ ಇದ್ದರು.