ಚುನಾವಣೆ ಗುಂಗಿಗೆ ನವರಾತ್ರಿ ಭಕ್ತಿಯ ರಂಗು !

bkt-20-12-a
ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಶುಕ್ರವಾರದ ಹಿನ್ನಲೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ದೇವೆಗೆ ಉಡಿ ತುಂಬಲು ಬುಟ್ಟಿಯಲ್ಲಿ ಉಡಿ ಸಾಮಗ್ರಿಗಳನ್ನು ಹೊತ್ತು ಸಾಗಿದರು.
Published on

ಅಶೋಕ ಶೆಟ್ಟರ, ಬಾಗಲಕೋಟೆ: ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಟಿಕೆಟ್ ಗಾಗಿ ಅನೇಕ ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ಈಗಾಗಲೆ ಆರಂಭಿಸಿದ್ದಾರೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ನವರಾತ್ರಿ ವೇಳೆ ಜಗನ್ಮಾತೆಯನ್ನು ಆರಾಧಿಸುವ ಮೂಲಕ ತಮಗೆ ರಾಜಕೀಯ ಶಕ್ತಿ ದಯಪಾಲಿಸುವಂತೆ ವಿಶೇಷ ಪೂಜೆ, ಪ್ರಾರ್ಥನೆ, ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ಬರುವ ಶುಕ್ರವಾರ ಎಂದರೆ ಅದು ಅತ್ಯಂತ ಶುಭದಿನ. ಈ ವೇಳೆ ಶಕ್ತಿ ದೇವತೆಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು ಲಭಿಸುತ್ತವೆ ಎನ್ನುವ ನಂಬಿಕೆ ಜನರಲ್ಲಿ ಇರುವಂತದ್ದು. ಹೀಗಾಗಿ ನವರಾತ್ರಿಯ ಶುಕ್ರವಾರ ದಿನ ಜಿಲ್ಲೆಯ ಶಕ್ತಿ ಪೀಠ ಪ್ರಸಿದ್ದ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ನಾಡಿನ ಮೂಲೆ ಮೂಲೆಗಳಿಂದಲೂ ಭಕ್ತರು ಹರಿದು ಬಂದಿದ್ದರು.

ನಾಡಿನಲ್ಲಿ ಉತ್ತಮ ಮಳೆ, ಬೆಳೆ ಬರಲಿ, ಜನರ ಆರೋಗ್ಯವಾಗಿರಲಿ, ಬರಗಾಲ ದೂರವಾಗಲಿ ಎಂದು ಸಹ ಅನೇಕ ರಾಜಕೀಯ ಮುಖಂಡರು ತಾಯಿಗೆ ವಿಶೇಷ ಪೂಜೆ ಮಾಡಿಸಿದ್ದು ಕಂಡು ಬಂದಿತು. ಇದರ ಮಧ್ಯ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದಲೂ ಸಹ ಶುಕ್ರವಾರ ಬನಶಂಕರಿಯಲ್ಲಿ ತಾಯಿಗೆ ಪೂಜೆ, ಪ್ರಾರ್ಥನೆ, ವಿವಿಧ ಸೇವಾ ಕಾರ್ಯಗಳು ಜರುಗಿದವು. ಚುನಾವಣೆ ಗುಂಗಿನಲ್ಲಿ ನವರಾತ್ರಿಯ ಭಕ್ತಿಗೆ ರಂಗು ನೀಡಿದರು.

ಕುಟುಂಬ ಸಮೇತರಾಗಿ ಈಶ್ವರಪ್ಪ ಪೂಜೆ ಕೈಂಕರ್ಯ :
ಮುಖ್ಯವಾಗಿ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ ತಮ್ಮ ತಂದೆ, ತಾಯಿ ಜೊತೆ ಆಗಮಿಸಿ ಪೂಜೆ ಸಲ್ಲಿಸಿದರು. ಈಶ್ವರಪ್ಪ ಅವರು ಮಡಿಬಟ್ಟೆ ಧರಿಸಿಕೊಂಡು ಶ್ರದ್ಧಾಭಕ್ತಿಯಿಂದ ಪತ್ನಿ, ಪುತ್ರ ಹಾಗೂ ಮೊಮ್ಮಗ ಸೇರಿದಂತೆ ತಮ್ಮ ಬಂಧುಗಳ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ, ಬನದ ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.

ನಾಡಿನಲ್ಲಿ ಉತ್ತಮ ಮಳೆ ಆಗಬೇಕು, ಬರಗಾಲ ದೂರವಾಗಬೇಕು. ಲೋಕಕಲ್ಯಾಣವಾಗಲಿ, ಇದರ ಜೊತೆ ದೇಶಕ್ಕೆ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಮಂತ್ರಿ ಆಗಬೇಕು. ಹಾಗೆಯೆ ಹಾವೇರಿ ಟಿಕೆಟ್ ಆಕಾಂಕ್ಷೆ ಇಟ್ಟುಕೊಂಡಿದ್ದೇನೆ. ಇವೆಲ್ಲವೂ ನಡೆಯಲಿ ಎಂದು ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ದಾಗಿ ಹೇಳಿದರು.

ಮಹಿಳೆಯರಿಗೆ ಉಡಿ ತುಂಬಿದ ವೀಣಾ :
ಒಂದು ಕಡೆಗೆ ಪುತ್ರನಿಗೆ ರಾಜಕೀಯ ಶಕ್ತಿ ದಯಪಾಲಿಸುವಂತೆ ಕೋರಿ ಈಶ್ವರಪ್ಪ ಅವರು ಪೂಜೆ ಸಲ್ಲಿಸಿದರೆ ಮತ್ತೊಂದೆಡೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ ಸಹ ದೇವಿಗೆ ಮೊರೆ ಹೋದರು. ನವರಾತ್ರಿ ಶುಕ್ರವಾರದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಒಂದುವರೆ ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿದರು. ಮಹಿಳೆಯರಿಗೆ ಸೀರೆ, ಕುಪ್ಪಸ, ಬಾಳೆಹಣ್ಣು, ಹರಿಷಣ ಕೊಂಬು, ಉತ್ತತ್ತಿ, ಅಕ್ಕಿ, ಬಳೆ, ಕೊಬ್ಬರಿ ಬಟ್ಟಲು ಜೊತೆ ಉಡಿ ತುಂಬಿದರು. ಹಾಗೆಯೇ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ಇದಕ್ಕೂ ಮುನ್ನ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಾಯಿ ಬನಶಂಕರಿಗೂ ಉಡಿ ತುಂಬಿ ಪ್ರಾರ್ಥಿಸಿದರು.

೨೫ ಸಾವಿರ ಭಕ್ತರು ತಾಯಿ ದರ್ಶನ :
ಇನ್ನು ನವರಾತ್ರಿ ಶುಭ ಶುಕ್ರವಾರ ಆಗಿದ್ದರಿಂದ ಬನಶಂಕರಿ ದೇವಸ್ಥಾನಕ್ಕೆ ನಾಡಿನ ಸಾವಿರಾರು ಭಕ್ತರು ಹರಿದು ಬಂದಿದ್ದರು. ದೇವಸ್ಥಾನದ ಆವರಣ ಸಂಪೂರ್ಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರ ದಂಡು ಬೀಡು ಬಿಟ್ಟಿತ್ತು. ನಸುಕಿನ ಜಾವದಿಂದಲೇ ಹರಿದು ಬರುತ್ತಿದ್ದ ಭಕ್ತರು ಇಡೀ ದಿನ ಅಂದಾಜು ೨೫ ಸಾವಿರದಷ್ಟು ನವರಾತ್ರಿ ಶುಕ್ರವಾರದಂದು ಶಕ್ತಿ ದೇವತೆ ಬನಶಂಕರಿ ತಾಯಿ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಚಿಕ್ಕಮಕ್ಕಳು, ವೃದ್ದರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಸರ್ಕಾರದ ಶಕ್ತಿ ಯೋಜನೆಯೂ ಸಹ ದೇವಸ್ಥಾನಕ್ಕೆ ಹರಿದು ಬರುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net