ಚುನಾವಣೆ ಕಾರ್ಯಗಳು ಸಮರ್ಪಕವಾಗಿ ನಡೆಯಲಿ

Election, District Collector, K.M. Janaki, Hunagunda,
ಹುನಗುಂದ ತಾಲೂಕು ಆಡಳಿತದ ಮುಂದೆ ಮತದಾನ ಜಾಗೃತಿ ಜಾಥಾಕ್ಕೆ ಜಿಲ್ಲಾ ಚುನಾವಣಾಧಿಕಾರಿ ಕೆ.ಎಂ.ಜಾನಕಿ ಚಾಲನೆ ನೀಡಿದರು. ಎಸ್‌ಪಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ ಇತರರಿದ್ದರು.
Published on

ಹುನಗುಂದ: ಮತಕ್ಷೇತ್ರದಲ್ಲಿ ತಾಲೂಕು ಮಟ್ಟದ ಚುನಾವಣಾಧಿಕಾರಿಗಳು ಕೈಗೊಂಡ ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಚುನಾವಣಾ ತಯಾರಿ ಸಭೆಯ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿದರು.

ಇಲ್ಲಿಯವರೆಗೆ ನಡೆದ ಚುನಾವಣಾ ಚುಟುವಟಿಕೆಗಳು ನಮ್ಮ ತಂಡಕ್ಕೆ ಸಮಾಧಾನಕರವಾಗಿಲ್ಲ. ಹುನಗುಂದ ಕ್ಷೇತ್ರದಲ್ಲಿ ಸ್ವೀಪ್ ಚಟುವಟಿಕೆ ಜತೆಗೆ ಎಲ್ಲ ಬಗೆಯ ಚುನಾವಣಾ ಕಾರ್ಯಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ತಾಲೂಕಿನ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಚೆಕ್‌ಪೋಸ್ಟ್‌ಗಳಿಂದ ಯಾವುದೇ ರೀತಿಯ ಗಮನಾರ್ಹ ಕಾರ್ಯ ನಡೆಯುತ್ತಿಲ್ಲ. ಈ ಕುರಿತು ಹೆಚ್ಚಿನ ತಪಾಸಣೆ ನಡೆಸಿ ಜವಾಬ್ದಾರಿ ವಹಿಸಿಬೇಕೆಂದು ಸೂಚಿಸಲಾಗಿದೆ.

ಇನ್ನೂ ಹೆಚ್ಚಿನ ಸೂಕ್ತ ನಿರ್ದೇಶನಗಳನ್ನು ನೀಡಲು ಎಲ್ಲ ವರ್ಗದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕ್ಷೇತ್ರದಲ್ಲಿಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡುವುದು, ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

85 ವಯಸ್ಸಿನ ವಯೋವೃದ್ಧರು ಹಾಗೂ ಅಂಗವಿಕಲರು ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ಸೌಲಭ್ಯ ಒದಗಿಸಲಾಗಿದೆ. ಆದರೆ ಅವರು ವೈದ್ಯಕೀಯ ಪಮಾಣ ಪತ್ರ ನೀಡಿದಲ್ಲಿ ಅವರು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗುವುದು.

ಚೆಕ್‌ಪೋಸ್ಟ್‌ಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ನಾವು ವಾರ್ ರೂಮ್‌ನಲ್ಲಿ ಗಮನಿಸುತ್ತೇವೆ. ಈ ಭಾಗದಲ್ಲಿ ಸಮರ್ಪಕವಾಗಿ ಕಾರ್ಯ ಆಗುತ್ತಿಲ್ಲ. ಈ ಕುರಿತು ಕ್ರಮಕ್ಕೆ ಸೂಚಿಸಲಾಗಿದೆ. ಈಗ ಓಡಾಡುವ ವಾಹನಗಳನ್ನು ಸರ್ವೇ ಮಾಡಿ ಅವಶ್ಯಕತೆ ಇದ್ದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ, ಡಿವೈಎಸ್ಪಿ ವಿಶ್ವನಾಥರಾವ ಕುಲಕರ್ಣಿ, ಸಿಪಿಐ ಸುನೀಲ ಸವದಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ತಾಪಂ ಇಒ ಮುರಳಿ ದೇಶಪಾಂಡೆ, ಬಿಇಒ ಜಾಸ್ಮಿನ್ ಕಿಲ್ಲೇದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net