

ಕಲಬುರಗಿ: ವೀರಶೈವ ಲಿಂಗಾಯತ ಮಹಾಸಭೆಗೆ ಜಿಲ್ಲಾಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದ್ದು, ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಜಿಲ್ಲೆಯ ಎಲ್ಲ ಮಠಾಧೀಶರ ಒಟ್ಟಾಭಿಪ್ರಾಯ ಸಂಗ್ರಹಿಸಿ ಪಕ್ಷಾತೀತ, ಧರ್ಮನಿಷ್ಠ, ಯೋಗ್ಯ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಚುನಾವಣೆಯಿಂದ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಸಮಾಜದ ಎಲ್ಲ ಗಣ್ಯರು, ಪ್ರಮುಖರು ಕೂಡಿಕೊಂಡು ಒಂದೇಡೆ ಸೇರಿ ನಾಮಪತ್ರ ಸಲ್ಲಿಸಿದ ಎಲ್ಲರಿಗೂ ಸೂಚನೆ ನೀಡಿ, ಚುನಾವಣೆ ಮಾಡದೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ವೀರಶೈವ ಮಹಾಸಭಾದ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು ಸಮಾಜದ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಚುನಾವಣೆ ಇಲ್ಲದೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದ್ದರು. ಆಗ ಅವರ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಪ್ರಸಕ್ತ ವರ್ಷವೂ ಈಶ್ವರ ಖಂಡ್ರೆ ಅವರು ಮಧ್ಯ ಪ್ರವೇಶಿಸಿ, ಪಕ್ಷಾತೀತ, ಸಮಾಜದ ಗಣ್ಯರು, ಸ್ವಾಮೀಜಿಗಳು ಸೂಚಿಸುವ, ಸಮಾಜದವರ ಮೇಲೆ ಹಲ್ಲೆ, ಸಮಾಜಕ್ಕೆ ಧಕ್ಕೆ ಆದಾಗ ಜತೆಗೆ ನಿಲ್ಲುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಖಂಡ್ರೆ ಅವರು ಉತ್ತಮ ನಿರ್ಧಾರ ಕೈಗೊಂಡು, ತೂಕಬದ್ಧ ನ್ಯಾಯವನ್ನು ನೀಡಬೇಕು. ಹೊಸ ಮುಖ, ಪಕ್ಷಾತೀತ ವ್ಯಕ್ತಿ ಜಿಲ್ಲಾಧ್ಯಕ್ಷರಾಗಬೇಕು ಎಂದು ಹೇಳಿದರು.
ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು, ಬೆಳಗುಂಪಿಯ ಶ್ರೀ ಅಭಿನವ ಪರ್ವತೇಶ್ವರ ಸ್ವಾಮೀಜಿ, ಅಂಬರೀಶ ಪಾಟೀಲ್ ಇದ್ದರು.