ಚುನಾವಣಾಪೂರ್ವ ಭರವಸೆ ಈಡೇರಿಸಿ

23kuudligi1
Published on

ಕೂಡ್ಲಿಗಿ: ಮುಂಬರುವ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವಂತೆ ಒತ್ತಾಯಿಸಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಪದಾಧಿಕಾರಿಗಳು ಗುರುವಾರ ಮನವಿ ಪತ್ರ ಸಲ್ಲಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ರೂಪಿಸಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುವರ್ಣ ಸಂಭ್ರಮದತ್ತ ಮುಂದಡಿ ಇಡುತ್ತಿದೆ. ದೇಶದಲ್ಲಿ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, ಶಾಲಾ ಪೂರ್ವ ಶಿಕ್ಷಣ ನೀಡುತ್ತಿದ್ದಾರೆ. ಈ ಮೂಲಕ ಅಪೌಷ್ಟಿಕ ಹಾಗೂ ರಕ್ತಹೀನತೆ ಸಮಸ್ಯೆಗಳನ್ನು ನಿವಾರಿಸಲು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂದು ದೂರಿದರು.

ಕನಿಷ್ಠ ಪ್ರಮಾಣದ ಗೌರವಧನ ನೀಡುತ್ತಿರುವ ಸರ್ಕಾರ ಬದುಕಲು ಬೇಕಾದಷ್ಟು ಸಂಭಾವನೆ ನೀಡುತ್ತಿಲ್ಲ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ನೀಡುವುದಾಗಿ ಭರವಸೆ ನೀಡಿದ್ದು ಇದುವರೆಗೂ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯೆಯರಾದ ಕೆ.ಪದ್ಮಾವತಿ, ಎಸ್.ಶಕುಂತಲಾ, ಶಿವಲೀಲಾ, ಜಿ.ಗಾಯಿತ್ರಿ, ಎಚ್.ಎಸ್.ಚಂದ್ರಮ್ಮ, ಜೆ.ಜಯಮಾಲಾ, ಎನ್.ರತ್ನಮ್ಮ, ದಾಕ್ಷಾಯಿಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net