

ತ್ಯಾಮಗೊಂಡ್ಲು: ಯಾವುದೇ ಸಂಘ-ಸಂಸ್ಥೆಯ ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಲು ಚುನಾವಣಾಧಿಕಾರಿ ನೇಮಿಸುವುದು ವಾಡಿಕೆ. ಅದರಂತೆ ಈ ಸಂಘದ ಚುನಾವಣಾ ಪ್ರಕ್ರಿಯೆ ನಡೆಸಲು ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಆದರೆ, ಅವರು ಕರ್ತವ್ಯಕ್ಕೆ ಹಾಜರಾಗದೆ ಆ ಜವಾಬ್ದಾರಿಯನ್ನು ಸಂಘದ ಸಿಇಒಗೆ ವಹಿಸಿದ್ದಾರೆ. ಸಂಘದ ಸಿಇಒ ಈ ಜವಾಬ್ದಾರಿಯನ್ನು ಹಾಲಿನ ಪಾತ್ರೆ ತೊಳೆಯುವ ನೌಕರನಿಗೆ ವಹಿಸಿದ್ದಾರೆ!
ಇದು ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಪಂನ ವಾದಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಕತೆ. ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆಸಲು ದಿನಾಂಕ ೋಷಿಸಲಾಗಿದೆ. ವೇಳಾಪಟ್ಟಿಯಂತೆ ಗುರುವಾರದಿಂದ (ಮೇ 12) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ, ಭಾನುವಾರ (ಮೇ 15) ಮುಗಿಯಬೇಕಿತ್ತು. ಆದರೆ, ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯ ಸೀನಿಯರ್ ಇನ್‌ಸ್ಪೆಕ್ಟರ್ ಟಿ.ಸಿ. ವಿಜಯಕುಮಾರ್ ಕರ್ತವ್ಯಕ್ಕೆ ವಿನಾ ಕಾರಣ ಗೈರಾಗಿದ್ದಾರೆ.
ನಾಮಪತ್ರ ವಿತರಿಸುವ ಜವಾಬ್ದಾರಿಯನ್ನು ಡೇರಿಯ ಸಿಇಒ ರಮೇಶ್ ಅವರಿಗೆ ಟಿ.ವಿ. ವಿಜಯಕುಮಾರ್ ವಹಿಸಿದ್ದಾರೆ. ರಮೇಶ್ ಕೂಡ ಕರ್ತವ್ಯಕ್ಕೆ ಹಾಜರಾಗದೆ, ಈ ಜವಾಬ್ದಾರಿಯನ್ನು ಡೇರಿಯಲ್ಲಿ ಹಾಲಿನ ಪಾತ್ರೆ ತೊಳೆಯುವ ಮುನಿನರಸಯ್ಯ ಎಂಬುವವರಿಗೆ ವಹಿಸಿ ಕೈತೊಳೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಪರ್ಧಾಕಾಂಕ್ಷಿಗಳು ಡೇರಿಯ ನಿರ್ದೇಶಕ ಸ್ಥಾನಕ್ಕೆ ನ್ಯಾಯಯುತವಾಗಿ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಕೂಡ ನಾಮಪತ್ರದ ಅರ್ಜಿ ಪಡೆದು, ಅದನ್ನು ಸಲ್ಲಿಸಿ, ಸೂಕ್ತವಾದ ಚಿಹ್ನೆ ಪಡೆಯಲು ಸ್ಪರ್ಧಾಕಾಂಕ್ಷಿಗಳು ಮುಂದಾಗಿದ್ದರು. ಆದರೆ, ಚುನಾವಣಾಧಿಕಾರಿಯೇ ಇಲ್ಲದಿರುವುದರಿಂದ ಬೇಸತ್ತು ಸ್ಪರ್ಧಾಕಾಂಕ್ಷಿಗಳಾದ ಚನ್ನಕೃಷ್ಣ , ಹುಚ್ಚಪ್ಪ ಮತ್ತು ಇವರ ಬೆಂಬಲಿಗರಾದ ವಿ.ಜಿ. ನಾಗರಾಜ್, ವಿ.ಎಂ. ಚೇತನ್, ಮಂಜುನಾಥ್, ಮಾರೇಗೌಡ ಮತ್ತಿತರರು ವಿಜಯವಾಣಿ ಬಳಿ ಸಮಸ್ಯೆ ಬಗ್ಗೆ ಅಲವತ್ತುಕೊಂಡರು.
ನಿಯಮಗಳ ಮಾಹಿತಿ ಇಲ್ಲದ ಷೇರುದಾರರು: ಒಂದೂವರೆ ವರ್ಷದ ಹಿಂದೆ ಮತದಾನದ ಹಕ್ಕು ಪಡೆಯುವ ನಿಯಮಗಳನ್ನು ತಿದ್ದುಪಡಿ ಮಾಡಿರುವ ಸಿಇಒ ರಮೇಶ್, ಆರು ತಿಂಗಳು ನಿರಂತರವಾಗಿ 500 ಲೀಟರ್ ಹಾಲು ಪೂರೈಸಿರಬೇಕು. 2 ಸಾಮಾನ್ಯ ಸಭೆಗೆ ಹಾಜರಾಗಿರಬೇಕು. ಸಂಘದಲ್ಲಿ ಪಶುಆಹಾರ, ತುಪ್ಪ ಸೇರಿ ಏನಾದರೂ ವಹಿವಾಟು ಮಾಡಿರಬೇಕು. ಅಂಥವರಿಗೆ ಮಾತ್ರವೇ ಮತದಾನ ಹಕ್ಕು ನೀಡುವುದಾಗಿ ನಿಯಮ ಮಾಡಿದ್ದಾರೆ. ಆದರೆ, ಈ ಬಗ್ಗೆ ಷೇರುದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ವಿ. ಅಶ್ವತ್ಥಯ್ಯ ದೂರಿದರು.
ಇದರ ಪರಿಣಾಮ, 90 ಸದಸ್ಯ ಬಲದ ಸಂಘದಲ್ಲಿ ಸಿಇಒ ರಮೇಶ್ ಅವರು ತಮಗೆ ಬೇಕಾದ 20 ಮಂದಿಗೆ ಮಾತ್ರವೇ ಮತದಾನದ ಹಕ್ಕು ನೀಡಿದ್ದಾರೆ. ಡೇರಿಗೆ ಹತ್ತಾರು ವರ್ಷಗಳಿಂದ ಹಾಲು ಪೂರೈಸುತ್ತಿದ್ದರೂ ಅವರೆಲ್ಲರನ್ನೂ ಮತದಾನ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದಾರೆ ಎಂದು ಆರೋಪಿಸಿದರು.
ಕೆಲವು ಹಾಲು ಪೂರೈಕೆದಾರರು 2 ಸಾಮಾನ್ಯ ಸಭೆಗಳಿಗೆ ಬಂದಿರಲಿಲ್ಲ. ಆದರೂ, ಸಭೆಗೆ ಹಾಜರಾಗಿದ್ದರು ಎಂಬಂತೆ ಹಿಂದಿನ ಸಭೆಯ ಹಾಜರಿ ಪುಸ್ತಕಗಳಿಗೆ ಸಹಿ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೇರಿಯಲ್ಲಿ ನಿರಂತರವಾಗಿ ಅವ್ಯವಹಾರ ನಡೆಯುತ್ತಿದೆ. ಬೇರೆಯವರು ಅಧಿಕಾರಕ್ಕೆ ಬಂದರೆ ಅವೆಲ್ಲವೂ ಬಹಿರಂಗವಾಗುತ್ತದೆ ಎಂಬ ಭೀತಿಯಿಂದ ಚುನಾವಣಾ ಅಕ್ರಮಕ್ಕೆ ಸಿಇಒ ರಮೇಶ್ ಮುಂದಾಗಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೇಲಧಿಕಾರಿಗಳು ನಿಷ್ಪಕ್ಷಪಾತವಾಗಿ ಚುನಾವಣಾ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಬೇಕು. ಕರ್ತವ್ಯಲೋಪ ಎಸಗಿರುವ ಸಹಕಾರ ಇಲಾಖೆಯ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯ ಸೀನಿಯರ್ ಇನ್‌ಸ್ಪೆಕ್ಟರ್ ಟಿ.ಸಿ. ವಿಜಯ್‌ಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿ. ಅಶ್ವತ್ಥಯ್ಯ, ಗ್ರಾಪಂ ಮಾಜಿ ಸದಸ್ಯ ನಾಮಪತ್ರ ಸಲ್ಲಿಸಲು ಎರಡು ದಿನಗಳಿಂದ ಡೇರಿಗೆ ಎಡತಾಕುತ್ತಿದ್ದೇನೆ. ಒಬ್ಬ ನೌಕರ ಬಿಟ್ಟು ಬೇರಾರೂ ಸಿಗುತ್ತಿಲ್ಲ. ಮಳೆಗಾಲವಾಗಿದ್ದು, ಹೊಲದಲ್ಲಿ ಬೇಕಾದಷ್ಟು ಕೆಲಸಗಳಿರುತ್ತವೆ. ಅವೆಲ್ಲವನ್ನೂ ಬಿಟ್ಟು ನಾಮಪತ್ರ ಸಲ್ಲಿಸಿ, ಚಿಹ್ನೆ ಪಡೆಯಲು ಓಡಾಡುತ್ತಿದ್ದೇನೆ. ನಾಮಪತ್ರದಲ್ಲಿ ಏನಾದರೂ ದೋಷಗಳಿದ್ದರೆ, ಅದನ್ನು ಸರಿಪಡಿಸಿಕೊಳ್ಳುವುದು ಯಾವಾಗ? ಚುನಾವಣಾಧಿಕಾರಿ ಈ ನಡೆ ಅಕ್ಷಮ್ಯ. ಚನ್ನಕೃಷ್ಣ, ಸ್ಪರ್ಧಾಕಾಂಕ್ಷಿ ಮತದಾರ ಪಟ್ಟಿಯನ್ನು ಹೇಗೆ ಅಂತಿಮಗೊಳಿಸಲಾಗಿದೆ ಎಂಬುದನ್ನು ಪ್ರಶ್ನಿಸಲು ಡೇರಿಯಲ್ಲಿ ಯಾರೂ ಗತಿಯಿಲ್ಲ. ಹಾಲಿ ಮತದಾರರ ಪಟ್ಟಿ ಸರಿಯಿಲ್ಲ. ಅರ್ಹರಿಗೆ ಮತದಾನದ ಹಕ್ಕು ನೀಡಲಾಗಿಲ್ಲ. ಸಹಕಾರ ಸಂಘದ ಮೇಲಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪುನೀತ್, ಸಂಘದ ಸದಸ್ಯ ನಾಮಪತ್ರ ಸ್ವೀಕರಿಸಲು ಡೇರಿ ಸಿಇಒ ರಮೇಶ್‌ಗೆ ತಿಳಿಸಲಾಗಿತ್ತು. ಅವರ ಗೈರಾಗುವ ಬಗ್ಗೆಯೂ ಕೂಡ ತಿಳಿಸದೆ ಕರ್ತವ್ಯ ಲೋಪ ಎಸಗಿದ್ದಾರೆ. ಶನಿವಾರದಿಂದ ನಾನೇ ಖುದ್ದಾಗಿ ಡೇರಿಯಲ್ಲಿ ನಾಮಪತ್ರ ಸ್ವೀಕರಿಸುತ್ತೇನೆ. ವಿಜಯಕುಮಾರ್ ಟಿ.ಸಿ. ಚುನಾವಣಾಧಿಕಾರಿ