ಚಿತ್ರದುರ್ಗ: ಮುಂಬರುವ ಲೋಕಸಭೆ ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡಿರುವ ವಿವಿಧ ತಂಡಗಳ ಅಧಿಕಾರಿ, ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ, ನಿಷ್ಪ್ಪ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ವಿಡಿಯೋ ಸಂವಾದ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ತೀವ್ರ ನಿಗಾ ವಹಿಸಲು ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು. ಎಂಸಿಸಿ, ಎಂಸಿಎಂಸಿ, ವಿಡಿಯೋ ಸರ್ವೆಲೆನ್ಸ್, ಸ್ಟ್ಯಾಟಿಕ್ ಸರ್ವೆಲೆನ್ಸ್, ನೋಡಲ್ ಅಧಿಕಾರಿಗಳು ಸೇರಿ ವಿವಿಧ ತಂಡಗಳನ್ನು ರಚಿಸ ಲಾಗಿದೆ. ಆಯಾ ತಂಡಗಳಿಗೆ ಚುನಾವಣೆ ಕರ್ತವ್ಯದ ಕುರಿತು ಕಾಲಕಾಲಕ್ಕೆ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಯಾವುದೇ ಲೋಪದೋಷ, ದೂರುಗಳಿಗೆ ಅವಕಾಶ ನೀಡಬಾರದು. ಮಾದರಿ ನೀತಿ ಸಂಹಿತೆ, ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣೆ ವಿಷಯ ಸೇರಿದಂತೆ ಚುನಾವಣಾ ಕರ್ತವ್ಯಗಳು ಅತ್ಯಂತ ಸೂಕ್ಷ್ಮ ವಿಷಯವಾಗಿವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಡಿಸಿ ಸೂಚಿಸಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್ಪಿ ಧರ್ಮೇಂದರ್‌ಕುಮಾರ್ ಮೀನಾ, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್, ಡಿಯುಡಿಸಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಚುನಾವಣಾ ವಿಭಾಗದ ಶಿರಸ್ತೇದಾರ್ ಮಲ್ಲಿಕಾರ್ಜುನ್, ತಹಸೀಲ್ದಾರ್‌ಗಳು, ಇತರ ಅಧಿಕಾರಿಗಳಿದ್ದರು.