

ಬೆಂಗಳೂರು ಗ್ರಾಮಾಂತರ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯ ಕೆಲಸಗಳಲ್ಲಿ ಲೋಪವಾಗದಂತೆ ಅಧಿಕಾರಿಗಳು ಪೂರ್ವ ಸಿದ್ಧತೆ ಕೈಗೊಂಡಿರಬೇಕು ಎಂದು ಚುನಾವಣಾ ವೀಕ್ಷಕರಾದ ಶಿವಯೋಗಿ ಸಿ ಕಳಸದ್ ಸೂಚಿಸಿದರು.
ರಾಮನಗರ ಜಿಪಂ ಸಭಾಂಗಣದಲ್ಲಿ ಚುನಾವಣೆ ಸಿದ್ಧತೆ ಸಂಬಂಧ ಪೂರ್ವಸಿದ್ಧತೆ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚುನಾವಣೆಯಲ್ಲಿ ಮತದಾರರ ಹಾಗೂ ಮತಗಟ್ಟೆಗಳ ಸಂಖ್ಯೆ ಕಡಿಮೆ ಇದೆ ಎಂದು ಉದಾಸೀನ ತೋರುವಂತಿಲ್ಲ. ಚುನಾವಣೆ ಕೆಲಸಕ್ಕೆ ನಿಯೋಜಿಸುವ ಪ್ರತಿ ಸಿಬ್ಬಂದಿ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಗೌಪ್ಯತೆ ಕಾಪಾಡಬೇಕು: ಮತದಾನ ಡಿ.10 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಮತದಾನ ನಡೆಯುವ ಕೊಠಡಿಯಲ್ಲಿ ಮತದಾನದ ಗೌಪ್ಯತೆ ಕಾಪಾಡುವ ರೀತಿ ಎಚ್ಚರಿಕೆ ವಹಿಸಿ ವಿಡಿಯೋ ಚಿತ್ರೀಕರಣ ನಡೆಯಬೇಕು. ಮತದಾನದ ಕೊಠಡಿಗೆ ಮತದಾರರು ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಶಿವಯೋಗಿ ಸಿ ಕಳಸದ್ ತಿಳಿಸಿದರು.
ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೆಲಸಗಳು ತಾಲೂಕು ಕೇಂದ್ರದಲ್ಲಿ ನಡೆಯಲಿದ್ದು, ರೂಟ್ ಮ್ಯಾಪ್ ಮಾಡಿಕೊಂಡು ಬೇಕಿರುವ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು. ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗೆ ತರಬೇತಿ ನೀಡಿರುವ ಮಾಹಿತಿ ಪಡೆದುಕೊಂಡರು.
ಸೂಕ್ಷ್ಮ ಮತಗಟ್ಟೆ ಗುರುತು: ರಾಮನಗರ ಜಿಲ್ಲೆಯಲ್ಲಿ 973 ಪುರುಷರು ಹಾಗೂ 1089 ಮಹಿಳೆಯರು ಸೇರಿ 2062 ಮತದಾರರಿದ್ದು, 122 ಗ್ರಾಪಂ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಸೇರಿ 126 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ 24 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಹಾಗೂ 48 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಮಾಹಿತಿ ನೀಡಿದರು.
ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಲಾ 145 ಪಿಆರ್‌ಒ, ಎಪಿಆರ್‌ಒ ಹಾಗೂ ಮೈಕ್ರೋ ವೀಕ್ಷಕರನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿಗೆ ಎರಡು ತಂಡ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
227 ಮತಗಟ್ಟೆ: ಬೆಂ.ಗ್ರಾಮಾಂತರ ಸ್ಧಳೀಯ ಸಂಸ್ಧೆಗಳ ಕ್ಷೇತ್ರದಲ್ಲಿ 227 ಮತಗಟ್ಟೆಗಳಿದ್ದು, ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಮಾಲೋಚಿಸಿ, ಈ ಕ್ಷೇತ್ರದ ಮತಗಟ್ಟೆಗಳ ಪೈಕಿ ಅತಿ ಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಪಿಆರ್‌ಒ ಮತ್ತು ಒಬ್ಬ ಮತಗಟ್ಟೆ ಅಧಿಕಾರಿ ಲೆಕ್ಕದಲ್ಲಿ, ಶೇ.10 ಮೀಸಲು ಸೇರಿ, 600 ಸಿಬ್ಬಂದಿ ಇರಲಿದ್ದಾರೆ. ಚುನಾವಣೆ ಸಂಬಂಧ ದೂರು ನಿರ್ವಹಣಾ ಮತ್ತು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಈ ಘಟಕದಲ್ಲಿ 2 ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. 2 ಜಿಲ್ಲೆಗಳ 8 ತಾಲೂಕು ಕಚೇರಿಗಳಲ್ಲೂ ದೂರು ನಿರ್ವಹಣಾ ಕೇಂದ್ರ ತೆರೆಯಲಾಗಿದೆ ಎಂದು ಜಿಪಂ ಸಿಇಒ ಇಕ್ರಂ ತಿಳಿಸಿದರು.