ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಲು ಸೂಚನೆ

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಲು ಸೂಚನೆ
Published on

ಹಾಸನ : ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಲು ಚುನಾವಣಾ ಆಯೋಗದ ಆಯುಕ್ತ ಮನೋಜ್ ಕುಮಾರ್ ಮೀನಾ ಅವರು ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಎಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಏ.29 ಮತ್ತು 30 ರಂದು ಎಲ್ಲಾ ಮತಗಟ್ಟೆಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲು ಮೆಗಾ ಕಾರ್ಯಕ್ರಮ ಮಾಡುವಂತೆ ತಿಳಿಸಿದರು.

ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಹೆಚ್ಚಿನ ಗಮನವಹಿಸಿ ಕೆಲಸ ನಿರ್ವಹಿಸಿ, ಇ.ವಿ.ಎಂ ಹಾಗೂ ವಿವಿಪ್ಯಾಟ್ ಕಮಿಷನಿಂಗ್ ಮಾಡುವಲ್ಲಿ ಚುನಾವಣಾ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದ್ದು, ಜಾಗ್ರತೆವಹಿಸುವಂತೆ ಸೂಚಿಸಿದರು.

ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟ್‌ಟಿಂಗ್ ಮಾಡಿಸಲು ಕ್ರಮವಹಿಸುವಂತೆ ಚುನಾವಣಾ ಆಯುಕ್ತರು ತಿಳಿಸಿದರಲ್ಲದೆ ಮತದಾನ ಪೂರ್ಣಗೊಂಡ ನಂತರ ಮತಯಂತ್ರಗಳನ್ನು ಸ್ಟ್ರಾಂಗ್‌ರೂಂಗೆ ಸಾಗಿಸುವವರೆಗೆ ಜವಾಬ್ದಾರಿವಹಿಸಬೇಕು ಎಂದು ಅವರು ಹೇಳಿದರು.

ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್. ಅವರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳೊಂದಿಗೆ ಮಾತನಾಡಿ, ರ‌್ಯಾಂಡಂಮೈಜೆಷನ್, ಇ.ವಿ.ಎಂ ಹಾಗೂ ವಿವಿಪ್ಯಾಟ್ ಕಮಿಷನಿಂಗ್ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಜರಿರುವಂತೆ ನೋಟಿಸ್ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿ ಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಲ್ಲಿಯೇ ಮತದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಸ್ಟ್ರಾಂಗ್‌ರೂಂ ಒಳಗೆ ಸ್ಮಾಟ್‌ವಾಚ್ ಧರಿಸಿಕೊಂಡು ಪ್ರವೇಶ ಮಾಡುವಂತಿಲ್ಲ, ಹಾಗೂ ಯಾರೂ ಕೂಡ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಇದರ ಬಗ್ಗೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಇದೇ ವೇಳೆ ಅಪರ ಜಿಲ್ಲಾಧಿಕಾರಿ ಆನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಗೂ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net