

ಚಾಮರಾಜನಗರ: ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರವು (ಚೂಡಾ) ನಗರಕ್ಕೆ ಸಮೀಪದ ಚಾಮರಾಜನಗರ-ಟಿ.ನರಸೀಪುರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಚಾಮರಾಜನಗರ ಹಾಗೂ ಮಸಗಾಪುರದ ಬಳಿ 14.24 ಎಕರೆ ಭೂಮಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಸತಿ ಬಡಾವಣೆಯಲ್ಲಿ ವಿವಿಧ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ ಎಂದು ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ತಿಳಿಸಿದರು.
ನಗರದ ಚೂಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಾಧಿಕಾರದ ಶೇ. 50ರಷ್ಟು ಪಾಲಿನ ವಿವಿಧ ಅಳತೆಯ ನಿವೇಶನಗಳನ್ನು ವಿವಿಧ ಪ್ರವರ್ಗಗಳ ಅಡಿಯಲ್ಲಿ ಕಡಿಮೆ ದರದಲ್ಲಿ ನೀಡಲಿದ್ದು, ಇಂದಿನಿಂದಲೇ (ಜ.16) ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು ಎಂದರು.
6.0 ಮೀ x 8.3 ಮೀ ಅಳತೆಯ ನಿವೇಶನಕ್ಕೆ 6,69,810 ರೂ. ಮೌಲ್ಯ ನಿಗದಿ ಮಾಡಿದ್ದು ಶೇ. 10ರಷ್ಟು ಅಂದರೆ 66,980 ರೂ. ಗಳ ಪ್ರಾರಂಭಿಕ ಠೇವಣಿ, ನೊಂದಣಿ ಶುಲ್ಕವಾಗಿ 100 ರೂ. ಗಳನ್ನು ಪಾವತಿಸಬೇಕಿದೆ. 9.0 ಮೀ x 15.0 ಮೀ ಅಳತೆಯ ನಿವೇಶನಕ್ಕೆ 18,15,750 ರೂ. ಮೌಲ್ಯ ನಿಗದಿ ಮಾಡಿದ್ದು ಶೇ. 10ರಷ್ಟು ಅಂದರೆ 1,81,575 ರೂ. ಗಳ ಪ್ರಾರಂಭಿಕ ಠೇವಣಿ, ನೊಂದಣಿ ಶುಲ್ಕವಾಗಿ 250 ರೂ. ಗಳನ್ನು ಪಾವತಿಸಬೇಕಿದೆ. 12.0 ಮೀ x 18.0 ಮೀ ಅಳತೆಯ ನಿವೇಶನಕ್ಕೆ 29,05,200 ರೂ. ಮೌಲ್ಯ ನಿಗದಿ ಮಾಡಿದ್ದು ಶೇ. 10ರಷ್ಟು ಅಂದರೆ 2,90,520 ರೂ. ಗಳ ಪ್ರಾರಂಭಿಕ ಠೇವಣಿ, ನೊಂದಣಿ ಶುಲ್ಕವಾಗಿ 500 ರೂ. ಗಳನ್ನು ಪಾವತಿಸಬೇಕಿದೆ. ಅರ್ಜಿ ಶುಲ್ಕ 500 ರೂ.ಗಳಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರದಿಂದ ನಿವೇಶನಗಳಿಗೆ ನಿಗದಿಪಡಿಸಿರುವ ದರ ಪ್ರತೀ ಚ.ಮೀ ಗೆ 13,450 ರೂ. ಗಳಾಗಿವೆ (ಚ. ಅಡಿಗೆ 1250 ರೂ.) ಆಗಿದ್ದು, ನಿವೇಶನಾಕಾಂಕ್ಷಿಗಳು ಚಾಮರಾಜನಗರದ ಇಂಡಿಯನ್ ಬ್ಯಾಂಕಿನಲ್ಲಿ ಅರ್ಜಿ ಪಡೆದು ಶೇ. 10ರಷ್ಟು ಶುಲ್ಕ ಮತ್ತು ನೊಂದಣಿ ಶುಲವನ್ನು ಫೆಬ್ರವರಿ 28ರೊಳಗೆ ಪಾವತಿಸಬೇಕಾಗುತ್ತದೆ. ಒಟ್ಟು 236 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಹಂಚಿಕೆಯಲ್ಲಿ ರೋಸ್ಟರ್ ಪದ್ದತಿ ಪಾಲಿಸಲಾಗುತ್ತಿದ್ದು ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಹಿಂದುಳಿದವರ್ಗ, ವಿಶೇಷಚೇತನರು, ಸೈನಿಕರು, ಇನ್ನಿತರ ವರ್ಗಗಳು, ಸಾಮಾನ್ಯ ವರ್ಗದವರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಸತಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ನಿವೇಶನಗಳನ್ನು 3ರಿಂದ 4 ತಿಂಗಳೊಳಗೆ ನೀಡಲಿದ್ದೇವೆ. ಸಾರ್ವಜನಿಕರು ನಗರಾಭಿವೃದ್ದಿ ಪ್ರಾಧಿಕಾರದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ನಗರದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಸಹಕಾರ ಮಾರ್ಗದರ್ಶನ ಹಾಗೂ ಉತ್ತೇಜನದಿಂದ ಚೂಡಾ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಮುಂದಾಗಿದೆ. ಪ್ರಾಧಿಕಾರವು ಚಾಮರಾಜನಗರಕ್ಕೆ ಹೊಂದಿಕೊಂಡಿರುವ ಕೋಡಿಮೋಳೆ ಕೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಚಟುವಟಿಕೆಗಳಿಗಾಗಿ 4.25 ಕೋಟಿ ರೂ. ವೆಚ್ಚದಲ್ಲಿ ವಿಸೃತ ಯೋಜನಾ ವರದಿ ಸಿದ್ದಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿದೆ. ಪ್ರಾಧಿಕಾರದ ವ್ಯಾಪ್ತಿಯ ಉದ್ಯಾನವನಗಳ ಅಭಿವೃದ್ದಿಗೂ ಮುಂದಾಗಿದ್ದೇವೆ ಎಂದರು.
ಚೂಡಾ ವ್ಯಾಪ್ತಿಯ ವಿಸ್ತಾರ ಈ ಹಿಂದಿಗಿಂತಲೂ ಹನ್ನೊಂದು ಪಟ್ಟು ಹೆಚ್ಚಾಗಿದೆ. ಹರದನಹಳ್ಳಿ, ಚಂದಕವಾಡಿ, ಕೂಡ್ಲೂರು, ಮಾದಾಪುರ ಮತ್ತು ಭೋಗಾಪುರ, ಬದನಗುಪ್ಪೆಯ ಸ್ವಲ್ಪ ಭಾಗ ವ್ಯಾಪ್ತಿಗೆ ಒಳಪಡುತ್ತಿದೆ. ಚೂಡಾ ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೂ ಮುಂದಾಗಿದೆ. ನಗರ ಪ್ರಾಧಿಕಾರ ವ್ಯಾಪ್ತಿಯಲ್ಲಿ 14 ಮಹಡಿಗಳವರೆಗೂ ಕಟ್ಟಡ ಕಟ್ಟಲು ಸಹ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಪುಟ್ಟಸ್ವಾಮಿ, ಎಸ್. ರಾಜು, ರಾಜೇಂದ್ರ, ಅಂಬಿಕಾ, ಆಯುಕ್ತರಾದ ಹೆಚ್.ವಿ. ಸೀಮಾ, ಸಹಾಯಕ ನಿರ್ದೇಶಕರಾದ ರಿತೇಶ್, ಎಂಜಿನಿಯರ್ ಐಶ್ವರ್ಯ ಹಾಜರಿದ್ದರು.