ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನ

12blk1
 ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ನಡೆದ ಅಕ್ಕ ವಚನ ಸಮ್ಮೇಳನವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಕೃಷ್ಣಮೂರ್ತಿ ಕುಲಕರ್ಣಿ, ಕಾಶಿನಾಥ ಭೂರೆ ಇತರರಿದ್ದರು.
Published on

ಭಾಲ್ಕಿ: ಚುಟುಕು ಎನ್ನುವುದು ಕೇವಲವಾಗಿ ಕಾಣುವ ವಿಚಾರವಲ್ಲ. ಚುಟುಕಿಗೆ ಮಹತ್ವದ ಸ್ಥಾನವಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಮತ್ತು ತಾಲೂಕು ಚುಟುಕು ಪರಿಷತ್ತು ಭಾಲ್ಕಿ, ಹಿರೇಮಠ ಸಂಸ್ಥಾನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಕ್ಕ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ವಾಟ್ಸಪ್, ಫೇಸ್ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಬಳಕೆಯಿಂದ ಯುವಕರ ಬದುಕು ಹಾಳು ಮಾಡುತ್ತಿದೆ. ಹಾಗಾಗಿ ಆದಷ್ಟು ಸೋಶಿಯಲ್ ಮಿಡಿಯಾ ಬಳಕೆಯಿಂದ ದೂರವಿದ್ದು, ಬಸವಾದಿ ಶರಣರು ಮನುಕೂಲದ ಒಳಿತಿಗೆ ನೀಡಿರುವ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿ ಅರ್ಥೈಸಿಕೊಂಡು ನಿಜ ಜೀವನದಲ್ಲಿ ಆಚರಣೆಗೆ ತರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲ ವರ್ಗದವರಿಗೆ ಆದ್ಯತೆ ನೀಡಿದರು. ಅದೇ ಮಾದರಿಯಲ್ಲಿ ಚುಟುಕು ಸಾಹಿತ್ಯ ಪರಿಷತ್‌ನಲ್ಲಿ ಎಲ್ಲ ವರ್ಗದ ಸಾಹಿತ್ಯ ಆಸಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯದಲ್ಲಿ ೨೬ ಶಾಖೆಗಳು ಹೊಂದಿದ್ದು, ಹೊರ ರಾಜ್ಯದಲ್ಲೂ ಚುಟುಕು ಸಾಹಿತ್ಯ ಪರಿಷತ್ತು ಘಟಕ ಕೆಲಸ ಮಾಡುತ್ತ ಸಾಹಿತ್ಯವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಅಕ್ಕ ಮಹಾದೇವಿ ಮಹಿಳಾ ಕೂಲಕ್ಕೆ ಮಾದರಿಯಾಗಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಚಿಕ್ಕಮಗಳೂರಿನಜಿ.ಬಿ. ಮಂಜುನಾಥ ಅನುಭಾವ ನೀಡಿದರು. ಬೀದರ್ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಂಗಮೇಶ ಜವಾದೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಸಂತೋಷ ಹಡಪದ ಇತರರಿದ್ದರು.

ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ಸ್ವಾಗತ ಗೀತೆ. ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಾಶಿನಾಥ ಭೂರೆ ಸ್ವಾಗತಿಸಿದರು. ರಾಜು ಜುಬರೆ, ದೀಪಕ ಠಮಕೆ ನಿರೂಪಣೆ ಮಾಡಿದರು. ನಾಗಶೆಟೆಪ್ಪ ಲಂಜವಾಡೆ ವಂದಿಸಿದರು.

ಯೋಗಾಂಗ ಪ್ರಶಸ್ತಿ ಪ್ರದಾನ: ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕ ಮಹಿಳೆಯರಿಗೆ ಯೋಗಾಂಗ ತ್ರಿವಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಚಾರ್ಯ ಡಾ.ರೇಖಾ ಮಹಾಜನ, ಪ್ರೋ.ಮಲ್ಲಮ್ಮ ಆರ್ ಪಾಟೀಲ್, ಪುಷ್ಪಾವತಿ ಶಿವರಾಜ ಗಂದಗೆ, ಮಲ್ಲಮ್ಮ ನಾಗನಕೇರೆ ಮತ್ತು ವಂದನಾ ರಮೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಖಂಡ್ರೆಗೆ ಚುಟುಕು ಚೇತನ ಪ್ರಶಸ್ತಿ: ಸಂಸದ ಸಾಗರ ಖಂಡ್ರೆ ಅವರಿಗೆ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಚುಟುಕು ಚೇತನ ಪ್ರಶಸ್ತಿ ನೀಡಲಾಯಿತು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಪ್ರಶಸ್ತಿ ನೀಡಿ ಗೌರವಿಸಿದರು.

ನೊಂದವರ ಬದುಕಿಗೆ ಅಕ್ಕನ ವಚನಗಳು ದಿವ್ಯ ಔಷಧಿಯಾಗಿವೆ. ಅಕ್ಕ ಮಹಾದೇವಿ ಬದುಕು ಅನುಸರಿಸಿದರೆ ಜೀವನ ಸುಂದರವಾಗಿ ರೂಪಗೊಳ್ಳಲಿದೆ.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net