

ತೀರ್ಥಹಳ್ಳಿ: ಚುಟುಕು ಸಾಹಿತ್ಯ ನಾಲ್ಕು ಸಾಲುಗಳಿಂದ ಕೂಡಿದ್ದರೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಓದುಗರನ್ನು ಚಿಂತನೆಗೆ ಹಚ್ಚುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಹೇಳಿದರು.
ಮಂಗಳವಾರ ತುಂಗಾ ಕಾಲೇಜಿನಲ್ಲಿ ಅಂತಿಮ ಬಿಎಸ್‌ಸಿ ವಿದ್ಯಾರ್ಥಿ ಪ್ರವೀಣ್‌ಕುಮಾರ್ ರಚಿಸಿರುವ ಚುಟುಕು ಕವನ ಸಂಕಲನ ‘ಅನುರಾಗ’ ಬಿಡುಗಡೆಗೊಳಿಸಿ ಮಾತನಾಡಿದರು.
ಪದವಿ ವ್ಯಾಸಂಗದ ಹಂತದಲ್ಲಿ ಚುಟುಕು ಕವನಗಳನ್ನು ರಚಿಸಿ ಪುಸ್ತಕವನ್ನು ಹೊರತಂದಿರುವ ಪ್ರವೀಣ್‌ಕುಮಾರ್ ಭವಿಷ್ಯದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ವಿಶ್ವಾಸವಿದೆ. ಸಾಹಿತ್ಯ ಕ್ಷೇತ್ರಕ್ಕೆ ಮಹಾನ್ ಸಾಹಿತಿಗಳನ್ನು ನೀಡಿರುವ ನೆಲದ ಈ ಪ್ರತಿಭಾವಂತನಲ್ಲಿ ಸಾಹಿತ್ಯ ಆಂತರಿಕವಾಗಿ ಅಡಗಿದೆ ಎಂದು ಪ್ರಶಂಸಿಸಿದರು.
ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಬಿ.ಗಣಪತಿ ಮಾತನಾಡಿ, ಲೌಕಿಕ ಬದುಕಿಗೂ ವಿಜ್ಞಾನ ಅಗತ್ಯ. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂದೇ ಕಾಲೇಜಿನ ವಿಜ್ಞಾನ ವಿದ್ಯಾರ್ಥಿ ಪ್ರವೀಣ್‌ಕುಮಾರ್ ರಚಿಸಿದ ಪುಸ್ತಕ ಬಿಡುಗಡೆ ಆಗುತ್ತಿರುವುದು ಸಂತಸದ ಸಂಗತಿ. ಸಾಹಿತ್ಯ ಲೋಕಕ್ಕೆ ಕೊಡುಗೆ ಕೊಡಬಲ್ಲ ದೃಷ್ಟಿ ಹೊಂದಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಪ್ರವೀಣ್‌ಕುಮಾರ್ ಮಾತನಾಡಿ, ವಿಜ್ಞಾನ ವಿಭಾಗದ ಉಪನ್ಯಾಸಕರ ಮಾರ್ಗದರ್ಶನ ನನಗೆ ಪ್ರೇರಣೆ. ನನ್ನ ಪುಸ್ತಕ ನಾನು ಓದುತ್ತಿರುವ ಕಾಲೇಜಿನಲ್ಲೇ ಬಿಡುಗಡೆಗೊಳ್ಳುತ್ತಿರುವುದು ಸಂತಸ ಮಾತ್ರವಲ್ಲದೇ, ಇನ್ನಷ್ಟು ಬರೆಯಲು ಉತ್ತೇಜನ ಸಿಕ್ಕಂತಾಗಿದೆ ಎಂದರು. ಇದೇ ವೇಳೆ ಟಿ.ಕೆ.ರಮೇಶ್ ಶೆಟ್ಟಿ ಹಾಗೂ ಪ್ರವೀಣ್‌ಕುಮಾರ್ ಅವರನ್ನು ಗೌರವಿಸಲಾಯಿತು.