

ಮದ್ದೂರು: ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲನಂದನಾಥ ಸ್ವಾಮೀಜಿ ಅಥವಾ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಆಯ್ಕೆ ಮಾಡಬೇಕೆಂದು ಚುಂಚಶ್ರೀ ಗೆಳೆಯರ ಬಳದ ಅಧ್ಯಕ್ಷ ಡಾ.ಕೃಷ್ಣ ಸಲಹೆ ನೀಡಿದ್ದಾರೆ.
ಪಟ್ಟಣದ ಬಿಜಿಎಸ್ ಗ್ರಂಥಾಲಯದಲ್ಲಿ ಬುಧವಾರ ಚುಂಚಶ್ರೀ ಗೆಳೆಯರ ಬಳಗ ಹಾಗೂ ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಅಧ್ಯಕ್ಷ, ನಾಡೋಜ ಡಾ.ಮಹೇಶ್‌ಜೋಶಿ ಅವರು ಈಗಾಗಲೇ ಸಮೇಳನಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿತ್ತು. ಇನ್ನೂ ಆಯ್ಕೆ ಮಾಡದಿರುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಸಮ್ಮೇಳನಾಧ್ಯಕ್ಷರಾಗಿ ರಾಜಕಾರಣಿಗಳು, ಉದ್ಯಮಿಗಳು ಅಥವಾ ಇನ್ನಿತರ ಕ್ಷೇತ್ರದವರನ್ನು ಆಯ್ಕೆ ಮಾಡಬಾರದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಕಸಾಪಗೆ ಮನವಿ ಮಾಡಿದರು.
ಡಾ.ನಿರ್ಮಲನಂದಸ್ವಾಮಿ ಅವರಿಗೆ ಪಟ್ಟಾಭಿಷೇಕವಾಗಿ 14 ವರ್ಷಗಳಾಗಿವೆ. ಈ ಅವಧಿಯಲ್ಲಿ ಅವರು, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಧಾರ್ಮಿಕ, ಸಾಹಿತ್ಯ. ಜಾನಪದ ಹಾಗೂ ಸೇವಾ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇದನ್ನು ಗಮನಿಸಿ 4 ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಇಂತಹ ಮಹಾನ್ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡುವುದು ಸೂಕ್ತ. ಇದರಿಂದ ಸಮ್ಮೇಳನಕ್ಕೂ ಒಂದು ಅರ್ಥ, ಗೌರವ ಬರುತ್ತದೆ ಎಂದು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ರಾಜಕಾರಣಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಜತೆಗೆ ಸಾಹಿತಿಗಳಾಗಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಗ್ರಂಥವಾದ ರಾಮಾಯಣ, ಮಹಾ ಅನ್ವೇಷಣೆ ಎಂಬ ಗ್ರಂಥಕ್ಕೆ ಸರಸ್ವತಿ ಸಮ್ಮಾನ್ ಎಂಬ ಪ್ರಶಸ್ತಿ ಬಂದಿದೆ. ಇದು ಜ್ಞಾನ ಪೀಠ ಪ್ರಶಸ್ತಿಗೆ ಸಮಾನಾದುದು. ಆದ್ದರಿಂದ ಡಾ.ನಿರ್ಮಲನಂದನಾಥ ಸ್ವಾಮೀಜಿ ಅಥವಾ ವೀರಪ್ಪ ಮೊಯ್ಲಿ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಸಿ.ಎಸ್. ಶಂಕರಯ್ಯ, ಕಾರ್ಯದರ್ಶಿ ವಿ.ಟಿ.ರವಿಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎಸ್.ಚಂದ್ರು, ಮಾಜಿ ಸದಸ್ಯ ನಾಗನಂದ, ಮುಖಂಡರಾದ ದೊರೆಸ್ವಾಮಿ, ಸಿ.ಸುರೇಶ್, ರಾಮಕೃಷ್ಣ, ಚಲುವರಾಜು, ರಾಮಚಂದ್ರು, ಚನ್ನಪ್ಪ ಇದ್ದರು.