ಚೀನಾ ವಿರುದ್ಧ ಬಿಜೆಪಿ ಕಾರ್ಯಕರ್ತರ ಧರಣಿ

h17 BJP 1
Published on

ಹುಬ್ಬಳ್ಳಿ: ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿದ ಚೀನಾ ವಿರುದ್ಧ ಬಿಜೆಪಿ ಹು-ಧಾ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ನಗರದ ದುರ್ಗದಬೈಲ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಭಾರತೀಯ ಯೋಧರ ಹತ್ಯೆ ನಡೆಸಿದ ಚೀನಾ ಕ್ರಮ ಖಂಡಿಸಿ, ಚೀನಾ ಅಧ್ಯಕ್ಷ ಜಿನ್​ಪಿಂಗ್ ಪ್ರತಿಕೃತಿ ದಹಿಸಿದರು. ಚೀನಾ ಉತ್ಪನ್ನಗಳನ್ನು ಭಾರತೀಯರು ನಿಷೇಧಿಸಬೇಕು. ದೇಶಿ ವಸ್ತುಗಳನ್ನು ಬಳಸುವ ಮೂಲಕ ಸದೃಢ ಭಾರತ ನಿರ್ವಣಕ್ಕೆ ಸಹಕರಿಸಬೇಕು ಎಂದು ಒತ್ತಾಯಿಸಿದರು. ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ರಾಜು ಕಾರ್ಯಾಣಮಠ, ಸಂತೋಷ ಅರಕೇರಿ, ನಾಗರಾಜ ಟಗರಗುಂಟಿ, ರಂಗನಾಯಕ ತಪೇಲಾ, ಗೋವಿಂದ ಬೇದ್ರೆ, ಅನೂಪ ಬಿಜವಾಡ, ರಾಮಚಂದ್ರ ಕುಲಕರ್ಣಿ, ಸಂಗಮ ಹಂಜಿ, ಗಜು ಜಡಿ ಇತರರಿದ್ದರು.

ನಿಯಮ ಉಲ್ಲಂಘನೆ: ಚೀನಾ ದೇಶದ ವಿರುದ್ಧ ಪ್ರತಿಭಟನೆ ನಡೆಸುವ ಭರದಲ್ಲಿ ಬಿಜೆಪಿ ಕಾರ್ಯಕರ್ತರು ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿದಂತೆ ವರ್ತಿಸಿದರು. ದುರ್ಗದಬೈಲ್ ವೃತ್ತದಲ್ಲಿ ಸಾಲಾಗಿ ನಿಂತಿದ್ದ ಪ್ರತಿಭಟನಾನಿರತರು ಪರಸ್ಪರ ಅಂತರವನ್ನೇ ಮರೆತಿದ್ದರು. ಕೆಲವರು ಮಾಸ್ಕ್ ಧರಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ, ಇನ್ನೂ ಕೆಲವರು ಅರ್ಧಂಬರ್ಧ ಮಾಸ್ಕ್ ಧರಿಸಿದ್ದರು.

ಚೀನಾ ಉದ್ಧಟತನಕ್ಕೆ ಭಾರತ ಪ್ರತ್ಯುತ್ತರ: ಲಡಾಖ್​ನಲ್ಲಿ ನಡೆದ ಘರ್ಷಣೆ ಯಲ್ಲಿ ವೀರಮರಣ ಹೊಂದಿದ ಭಾರತೀಯ ಸೈನಿಕರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು.

ಧಾರವಾಡ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಹತ್ತಿರದ ಕಾರ್ಗಿಲ್ ಸ್ತೂಪದ ಬಳಿ ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಶ್ರೀರಾಮ ಸೇನೆ, ಕರವೇ, ಬಜರಂಗ ದಳ ಕಾರ್ಯಕರ್ತರ ಸಹಯೋಗದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕಾರ್ಗಿಲ್ ಸ್ತೂಪದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ಚೀನಾದ ಉದ್ಧಟತನದಿಂದ ದೇಶದ 20 ಯೋಧರು ಹುತಾತ್ಮ ರಾಗಿದ್ದಾರೆ. ಅದಕ್ಕೆ ಪ್ರತೀಕಾರವಾಗಿ ನಮ್ಮ ಸೈನಿಕರು ಚೀನಾದ 43 ಸೈನಿಕರನ್ನು ಹೊಡೆದುರುಳಿಸಿ ಉತ್ತರ ಕೊಟ್ಟಿದ್ದಾರೆ. ಇದು ಕಾಂಗ್ರೆಸ್, ನೆಹರು, ರಾಹುಲ್ ಸರ್ಕಾರ ಅಲ್ಲ. ನರೇಂದ್ರ ಮೋದಿ ಸರ್ಕಾರ ಎಂದು ಚೀನಾ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net