ಚೀನಾ ವಿರುದ್ಧ ಟಿಬೆಟಿಯನ್ನರ ಪ್ರತಿಭಟನೆ

16
Published on

ಮೈಸೂರು: ಕೋವಿಡ್ ಕಠಿಣ ನಿಯಮದ ವಿರುದ್ಧ ಹೋರಾಡುತ್ತಿರುವ ಚೀನಿಯರ ಒಗ್ಗಟ್ಟಿನ ಹೋರಾಟಕ್ಕೆ ಬೆಂಬಲ ಸೂಚಿಸಿದ ಟಿಬೆಟಿಯನ್ನರು ಚೀನಾ ಸರ್ಕಾರದ ವಿರುದ್ಧ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ವಿಶ್ವ ಮಾನವ ಹಕ್ಕುಗಳ ದಿನದ ಅಂಗವಾಗಿ ಟಿಬೆಟ್ ಯುವ ಕಾಂಗ್ರೆಸ್, ಪ್ರಾಂತೀಯ ಟಿಬೆಟನ್ ಮಹಿಳಾ ಸಂಘಟನೆ, ಬೈಲಕುಪ್ಪೆ, ಹುಣಸೂರು, ಕೊಳ್ಳೇಗಾಲ ಮತ್ತು ಮೈಸೂರು ಟಿಬೆಟನ್ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಘೋಷಣೆ ಕೂಗಿದರು.

300 ಮಿಲಿಯನ್‌ಗೂ ಹೆಚ್ಚಿನ ಚೀನಿಯರು ಈಗಲೂ ಲಾಕ್‌ಡೌನ್ ಪರಿಸ್ಥಿತಿಗೆ ಗುರಿಯಾಗಿದ್ದಾರೆ. ಇದರಿಂದಾಗಿ ಅಲ್ಲಿನ ಜನತೆ ಆಹಾರ, ಔಷಧ, ಸಂಚಾರ ವ್ಯತ್ಯಯ, ಮಾನಸಿಕ ತೊಳಲಾಟದಿಂದಾಗಿ ಕಂಗಾಲಾಗಿದ್ದಾರೆ. ಕೋವಿಡ್ ನಿಯಮದ ಪರಿಣಾಮವಾಗಿ ಜನತೆ ಅಲ್ಲಿನ ಆಡಳಿತದ ವಿರುದ್ಧ ಬಂಡೆದ್ದು, ಸ್ವಾತಂತ್ರೃ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಫಿಪಾ ವಿಶ್ವಕಪ್ ಪಂದ್ಯದಲ್ಲಿ ಮಿಲಿಯನ್‌ಗಟ್ಟಲೆ ಜನರು ಮಾಸ್ಕ್ ಧರಿಸದೆ ಸಂಭ್ರಮಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚೀನಾ ಆಡಳಿತವು ತಮ್ಮ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕು. ಸಾಮೂಹಿಕ ರಕ್ಷಣಾ ಕಾರ್ಯ ಯೋಜನೆ ಹಾಕಿಕೊಂಡು ಜನರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.


ಜತೆಗೆ, ಟಿಬೆಟ್ ನಾಡಿನಲ್ಲಿ ಟಿಬೆಟನ್ನರ ಮನಸ್ಥಿತಿಯನ್ನು ಅರಿತು, ಅವರ ಬೇಡಿಕೆ ಈಡೇರಿಸಬೇಕು. ಪಂಚೇನ್ ಲಾಮಾರನ್ನು ಒಳಗೊಂಡು, ಎಲ್ಲ ಟಿಬೆಟಿಯನ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. ವಿಶ್ವ ಸಂಸ್ಥೆಯು ಟಿಬೆಟ್‌ನಲ್ಲಿನ ವಸ್ತುಸ್ಥಿತಿ ಅರಿಯಲು ಕಳುಹಿಸಿದ ತಂಡದ ನಿರ್ಧಾರವನ್ನು ಗೌರವಿಸಬೇಕು ಎಂದು ಚೀನಾ ಸರ್ಕಾರವನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net