ಚೀಟಿಯಲ್ಲಿ ಪ್ಯಾಟಿಗೆ ಖುಲಾಯಿಸಿದ ಅದೃಷ್ಟ !

Patty is lucky to get free in the ticket!
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಪಂ ಅಧ್ಯಕ್ಷರಾಗಿ ಸಿದ್ರಾಮಪ್ಪ ಬಸಪ್ಪ ಪ್ಯಾಟಿ ಆಯ್ಕೆಯಾಗಿದ್ದನ್ನು ಆಕ್ಷೇಪಿಸಿದ ಒಂದು ಬಣದ ಗ್ರಾಪಂ ಸದಸ್ಯ ಶರಣಗೌಡ ಸಿದರೆಡ್ಡಿ ಚುನಾವಣಾಧಿಕಾರಿ ಮಾಳಪ್ಪ ಪೂಜಾರಿ ಅವರೊಂದಿಗೆ ವಾಗ್ವಾದ ನಡೆಸಿದರು.
Published on

ಮುದ್ದೇಬಿಹಾಳ: ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ತಾಲೂಕಿನ ನಾಗರಬೆಟ್ಟ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿದ್ದು ಸ್ಪರ್ಧಿಗಳಿಬ್ಬರು ಸಮ ಮತ ಪಡೆದಿದ್ದರಿಂದ ಚೀಟಿ ಎತ್ತಿ ಅಧ್ಯಕ್ಷ ಸ್ಥಾನದ ಆಯ್ಕೆ ನಡೆಸಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಲಕ್ಷ್ಮೀ ಶಿವಯೋಗಿಮಠ ಹಾಗೂ ಸಿದ್ರಾಮಪ್ಪ ಪ್ಯಾಟಿ ಇವರಿಬ್ಬರು ನಾಮಪತ್ರ ಸಲ್ಲಿಸಿದ್ದರು. 12 ಸದಸ್ಯ ಬಲದ ಪಂಚಾಯಿತಿಯಲ್ಲಿ ಇಬ್ಬರಿಗೂ ತಲಾ ಆರು ಮತಗಳು ಬಂದವು. ಆಗ ನಿಯಮದಂತೆ ಚುನಾವಣಾಧಿಕಾರಿ ಚೀಟಿ ಎತ್ತುವ ಪ್ರಕ್ರಿಯೆ ನಡೆಸಿದ್ದು ಚೀಟಿಯಲ್ಲಿ ಸಿದ್ರಾಮಪ್ಪ ಪ್ಯಾಟಿ ಅವರ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷರಾಗಿ ಸಿದ್ರಾಮಪ್ಪ ಪ್ಯಾಟಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಾಳಪ್ಪ ಪೂಜಾರಿ ಘೋಷಣೆ ಮಾಡಿದರು. ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ ಚಲವಾದಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಸಹಾಯಕರಾಗಿ ಪಿಡಿಒ ವೀರೇಶ ಹೂಗಾರ ಕಾರ್ಯನಿರ್ವಹಿಸಿದರು.

ಚೀಟಿ ಎತ್ತುವ ಪ್ರಕ್ರಿಯೆಗೆ ಆಕ್ಷೇಪ: ಚುನಾವಣಾಧಿಕಾರಿಗಳು ಅಧ್ಯಕ್ಷ ಸ್ಥಾನದ ಘೋಷಣೆಗೆ ಚೀಟಿ ಪ್ರಕ್ರಿಯೆ ನಡೆಸಲು ಮುಂದಾದಾಗ ಒಂದು ಬಣದವರು ಸಭೆಯಿಂದ ಹೊರಗಡೆ ಬಂದಿದ್ದರು. ಆಗ ಇನ್ನೊಂದು ಬಣದವರು ಸಭೆಯಲ್ಲಿದ್ದರು. ಅವರ ಸಹಮತಿ ಪಡೆದುಕೊಂಡು ಚೀಟಿ ಎತ್ತಿ ಫಲಿತಾಂಶ ಪ್ರಕಟಿಸಿದ್ದೇನೆ ಎಂದು ಚುನಾವಣಾಧಿಕಾರಿ ಮಾಳಪ್ಪ ಪೂಜಾರಿ ಹೇಳಿದರು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಂದು ಬಣದ ಗ್ರಾಪಂ ಸದಸ್ಯ ಶರಣಗೌಡ ಸಿದರೆಡ್ಡಿ, ಚುನಾವಣಾಧಿಕಾರಿ ನಿಯಮಬಾಹಿರವಾಗಿ ಚೀಟಿ ಎತ್ತುವ ಪ್ರಕ್ರಿಯೆ ನಡೆಸಿದ್ದಾರೆ. ಸಮಮತಗಳನ್ನು ಪಡೆದಾಗ ಎರಡೂ ಬಣದವರನ್ನು ಕರೆದು ಅವರ ಸಮ್ಮುಖದಲ್ಲಿ ಚೀಟಿ ಎತ್ತಬೇಕಿತ್ತು. ಆದರೆ ಒಂದು ಬಣದ ಅನುಪಸ್ಥಿತಿಯಲ್ಲಿ ಚೀಟಿ ಎತ್ತಿದ್ದಾರೆ. ಅದಕ್ಕೆ ಆ ಬಣದವರು ವಿರೋಧಿಸಿದ್ದರೂ ಫಲಿತಾಂಶ ಘೋಷಣೆ ಮಾಡಿರುವುದು ಸರಿಯಾದದುಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವಿಷಯವಾಗಿ ಚುನಾವಣಾಧಿಕಾರಿಯೊಂದಿಗೂ ತೀವ್ರ ವಾಗ್ವಾದ ನಡೆಸಿದರು.

ವ್ಯಾಪಕ ಪೊಲೀಸ್ ಭದ್ರತೆ: ಫಲಿತಾಂಶದ ಕುರಿತು ವಿವಾದ ಉಂಟಾದ ಕೂಡಲೇ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಆರೀಫ್ ಮುಶಾಪುರಿ, ಸುರೇಶ ಮಂಟೂರ, ರಾಮನಗೌಡ ಸಂಕನಾಳ ಹಾಗೂ 25ಕ್ಕೂ ಹೆಚ್ಚು ಪೊಲೀಸರು ಗ್ರಾಪಂ ಆವರಣದಲ್ಲಿ ಬಂದೋಬಸ್ತ್ ಹಾಕಿದ್ದರು. ಅನಧಿಕೃತ ವ್ಯಕ್ತಿಗಳನ್ನು ಪಂಚಾಯಿತಿ ಆವರಣದಿಂದ ಹೊರಗಡೆ ಕಳುಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net