

ಹೊಸಕೋಟೆ: ಚೀಟಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು, ಹಣ ಕಟ್ಟಿದ್ದ ಸಾರ್ವಜನಿಕರು ಹಣ ವಾಪಸ್ ಕೊಡಿಸುವಂತೆ ಪೊಲೀಸರನ್ನು ಒತ್ತಾಯಿಸಿ ಗುರುವಾರ ನಗರದ ಕೆಇಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶಿವಕುಮಾರ್ ಎಂಬುವವರು ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿದ್ದರು. ಆದರೆ ಅವರು ಅನಾರೋಗ್ಯದಿಂದ ಆಗಸ್ಟ್‌ನಲ್ಲಿ ಮೃತಪಟ್ಟಿದ್ದು, ಹಣ ಕಟ್ಟಿದವರು ಕಂಗಾಲಾಗಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿ, ಕುಟುಂಬಸ್ಥರಿಂದ ಹಣ ಕೊಡಿಸಲು ಮನವಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
20 ವರ್ಷಗಳಿಂದ ಹಣಕಾಸು ವ್ಯವಹಾರ ಹಾಗೂ ಚೀಟಿ ವ್ಯವಹಾರ ಮಾಡಿಕೊಂಡು ಬಂದಿದ್ದ ಶಿವಕುಮಾರ್ ಆಗಸ್ಟ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಆತ ನಡೆಸುತ್ತಿದ್ದ ಎಲ್ಲ ವ್ಯವಹಾರ ನಿಂತಿಹೋಗಿದೆ. ಕಟ್ಟಿದ್ದ ಹಣ ವಾಪಸ್ ನೀಡುವಂತೆ ಕುಟುಂಬದವರನ್ನು ಒತ್ತಾಯಿಸಿದರೂ ಅತ್ತ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ತನಿಖೆ ಹಂತದಲ್ಲಿದೆ: ನಗರ ಠಾಣೆಯ ವೃತ್ತ ನಿರೀಕ್ಷಕ ಮಂಜುನಾಥ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿ, ಸಾರ್ವಜನಿಕರ ದೂರು ದಾಖಲಿಸಲಾಗಿದೆ, ತಲೆಮರೆಸಿಕೊಂಡಿರುವ ಕುಟುಂಬದವರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ತಲೆಮರೆಸಿಕೊಂಡವರು ನ್ಯಾಯಾಲಯದಲ್ಲಿ ಬೇಲ್ ಪಡೆಯಲು ಅರ್ಜಿ ಸಲ್ಲಿಸಿದ್ದರು, ಆದರೆ ನಾವು ನೀಡಿದ ಪ್ರಥಮ ವರ್ತಮಾನದ ವರದಿ ಆಧರಿಸಿ ಆರೋಪಿಗಳಿಗೆ ನ್ಯಾಯಾಲಯ ಬೇಲ್ ಅರ್ಜಿ ವಜಾಗೊಳಿಸಿದೆ ಎಂದು ತಿಳಿಸಿದರು. ಈ ಪ್ರಕರಣವನ್ನು ಉನ್ನತಾಧಿಕಾರಿಗಳ ಗಮನಕ್ಕೂ ತಂದಿದ್ದು ಸಿಒಡಿ ತನಿಖೆಗೆ ನೀಡಲು ನಿರ್ಧರಿಸಲಾಗಿದೆ ಮೃತನ ಹೆಸರಿನಲ್ಲಿದ್ದ 13 ಆಸ್ತಿ ಜಪ್ತಿ ಮಾಡಿ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸಲಾಗಿದೆ, ಪ್ರಕರಣ ತನಿಖಾ ಹಂತದಲ್ಲಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
46 ಕೋಟಿ ರೂಪಾಯಿಗೆ ನಾಮ: ಚೀಟಿ ಸೇರಿ ವಿವಿಧ ಹಣಕಾಸಿನ ವ್ಯವಹಾರದಲ್ಲಿ 400ಕ್ಕೂ ಹೆಚ್ಚು ಮಂದಿ ಶಿವಕುಮಾರ್ ಬಳಿ ಹಣ ಹೂಡಿದ್ದರು. ಸುಮಾರು 46 ಕೋಟಿ ರೂಪಾಯಿಯಷ್ಟು ಹಣದ ವ್ಯವಹಾರವಿತ್ತು ಎನ್ನಲಾಗಿದೆ. ನಗರ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಲೆಮರೆಸಿಕೊಂಡಿರುವ ಕುಟುಂಬಸ್ಥರನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸಬೇಕೆಂದು ಒತ್ತಾಯಿಸಲಾಗಿದೆ. ಏತನ್ಯಧ್ಯೆ ಶಿವಕುಮಾರ್ ನಡೆಸುತ್ತಿದ್ದ ಹಣದ ವ್ಯವಹಾರದ ಬಗ್ಗೆ ನಮಗೇನೂ ಗೊತ್ತಿಲ್ಲ, ಹಣ ವ್ಯವಹಾರದ ಬಗ್ಗೆ ಏನಾದರೂ ದಾಖಲೆ ಇಟ್ಟಿದ್ದರೆ ಪರಿಶೀಲಿಸಿ ಸಾಧ್ಯವಾದಷ್ಟು ಹಣ ವಾಪಸ್ ಕೊಡುವುದಾಗಿ ಕುಟುಂಬಸ್ಥರು ಹಾರಿಕೆ ಉತ್ತರ ನೀಡುತ್ತಿದ್ದರು ಎನ್ನಲಾಗಿದೆ.