ಚೀಟಿ ಹಣ ವಾಪಸ್ ಕೊಡದೆ ವಂಚನೆ

25Rajesh4
Published on

ಚಾಮರಾಜನಗರ: ಜಿಲ್ಲೆಯಲ್ಲಿ ಮೈಕ್ರೋ ೈನಾನ್ಸ್ ಹಾವಳಿ ನಡುವೆ ಹಬ್ಬದ ಚೀಟಿ ಹಣ ವಂಚನೆಯೂ ದೊಡ್ಡ ಸದ್ದು ಮಾಡುತ್ತಿದೆ.

ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ವಗ್ರಾಮ, ಯಳಂದೂರು ತಾಲೂಕಿನ ಉಪ್ಪಿನಮೋಳೆಯ 60ಕ್ಕೂ ಹೆಚ್ಚು ಮಹಿಳೆಯರು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರನ್ನು ಶನಿವಾರ ಭೇಟಿ ಮಾಡಿದರು. ಉಪ್ಪಿನಮೋಳೆಯ ಗೌರಮ್ಮ, ವೈ.ಕೆ.ಮೋಳೆಯ ಸರಸ್ವತಿ ಹಣ ಕೊಟ್ಟಿಸಿಕೊಂಡು ವಾಪಸ್ ಕೊಟ್ಟಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಈ ಕುರಿತು ಒಂದು ತನಿಖಾ ತಂಡವನ್ನು ರಚನೆ ಮಾಡುತ್ತೇವೆ. ನಿಮಗೆಲ್ಲ ಹಣ ವಾಪಸ್ ಕೊಡಿಸುವುದಕ್ಕೆ ಕ್ರಮ ವಹಿಸುತ್ತೇವೆ. ಪೊಲೀಸರು ಈಗಾಗಲೇ ನಿಮ್ಮಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಒಂದು ವಾರದೊಳಗೆ ತನಿಖೆ ನಡೆಸಿ ಕ್ರಮವಹಿಸುತ್ತೇವೆ ಎಂದರು. ಈ ವೇಳೆ ಮಹಿಳೆಯೊಬ್ಬರು ಡಿಸಿಗೆ ಕೈ ಮುಗಿದು ಹಣ ವಾಪಸ್ ಕೊಡಿಸಿಕೊಡಿ ಎಂದು ಅಳುತ್ತಾ ಕೇಳಿಕೊಂಡರು. ಡಿಸಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ದಯವಿಟ್ಟು ಮಹಿಳೆಯರು ಯಾವುದೇ ಕಾರಣಕ್ಕೂ ದುಡುಕು ನಿರ್ಧಾರ ಕೈಗೊಳ್ಳಬೇಡಿ, ಊರು ಬಿಟ್ಟು ಹೋಗುವುದನ್ನು ಮಾಡಬೇಡಿ. ಬೇರೆ ರೀತಿ ಆಲೋಚನೆ ಮಾಡಬೇಡಿ. ನನ್ನ ಗಮನದಲ್ಲಿ ಈ ಘಟನೆ ಇದೆ. ಸಮಸ್ಯೆ ಸರಿ ಮಾಡೋಣ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಚೀಟಿ ನಡೆಸುತ್ತಿದ್ದ ಇಬ್ಬರೂ ಊರು ಬಿಟ್ಟು ಹೋಗಿಲ್ಲ. ಹೀಗಾಗಿ ಅವರನ್ನು ಹುಡುಕಬೇಕು ಎನ್ನುವುದೇನಿಲ್ಲ. ಅವರಿಂದ ಹಣ ಕೊಡಿಸುವ ಕೆಲಸ ಆಗಲಿದೆ ಎಂದು ಮಹಿಳೆಯರಿಗೆ ಧೈರ್ಯ ಹೇಳಿದರು. ಅಧಿಕಾರಿಗಳಿಂದ ಭರವಸೆ ಸಿಕ್ಕ ಬಳಿಕ ಮಹಿಳೆಯರು ಗ್ರಾಮಕ್ಕೆ ತೆರಳಿದರು.

246 ಮಹಿಳೆಯರಿಗೆ ಮೋಸ:

ನಮ್ಮೂರಿನ 246 ಮಹಿಳೆಯರ ಬಳಿ ಚೀಟಿ ಕಟ್ಟಿಸಿಕೊಂಡು ವಾಪಸ್ ಹಣ ಕೊಡದೆ ಮೋಸ ಮಾಡಲಾಗಿದೆ ಎಂದು ಉಪ್ಪಿನಮೋಳೆ ಗ್ರಾಮದ ಪುಷ್ಪಾ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದ ಚೌಡಮ್ಮ, ವೈ.ಕೆ.ಮೋಳೆಯ ಸರಸ್ವತಿ ಇಬ್ಬರೂ ಸೇರಿಕೊಂಡು ಚೀಟಿ ನಡೆಸಿದ್ದರು. ಪ್ರತಿ ಹಬ್ಬಗಳಿಗೂ ಹಣ ಪಡೆದುಕೊಂಡು ಇದಕ್ಕೆ ಎರಡು ಪಟ್ಟು ಹಣ ವಾಪಸ್ ಕೊಡುವುದಾಗಿ ಹೇಳಿದ್ದರು. ನಮ್ಮೂರಲ್ಲಿ 246 ಮಹಿಳೆಯರು ಕಂತಿನ ರೂಪದಲ್ಲಿ ಕೋಟ್ಯಂತರ ರೂ. ಕಟ್ಟಿದ್ದೆವು. ಹಣ ವಾಪಸ್ ಕೊಡದೆ ಇದ್ದಾಗ ನಾವೆಲ್ಲರೂ ಸೇರಿ ಪ್ರತಿಭಟನೆ ಮಾಡಲು ಮುಂದಾದೆವು. ಆಗ ಸ್ವಲ್ಪ ಹಣ ವಾಪಸ್ ಕೊಟ್ಟು, ಅಂತಿಮವಾಗಿ 1 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಾಪಸ್ ಕೊಟ್ಟಿಲ್ಲ. ಚೀಟಿ ನಡೆಸುತ್ತಿದ್ದ ಚೌಡಮ್ಮಳನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ವೈ.ಕೆ.ಮೋಳೆ ಸರಸ್ವತಿ ಊರಲ್ಲೇ ಇದ್ದಾಳೆ. ಇವರಿಂದ ನಮಗೆ ಹಣ ಕೊಡಿಸಿಕೊಡಿ ಎಂದು ಕೋರಿದರು.

ಊರಲ್ಲಿ ಹಬ್ಬಗಳಿಗಾಗಿ ಚೀಟಿ ಹಣ ಕಟ್ಟುತ್ತೇವೆ. ನಮ್ಮ ಮನೆಗಳ ಬಾಗಿಲಿಗೆ ಬಂದು ಹಣ ಕಟ್ಟಿಸಿಕೊಳ್ಳುತ್ತಿದ್ದರು. ಮೊದಲು ಹಣ ಕೊಡುತ್ತಿದ್ದರು. ಆದರೆ, ದಿನ ಕಳೆದಂತೆ ಹಣ ವಾಪಸ್ ಕೊಡುವುದನ್ನೇ ನಿಲ್ಲಿಸಿಬಿಟ್ಟರು. ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಹಣವೆಂದು ಒಂದಷ್ಟು ಹಣವನ್ನು ಮನ್ನಾ ಮಾಡಿಕೊಂಡರು. ಉಳಿದ ಹಣವನ್ನೂ ಕೊಡುತ್ತಿಲ್ಲ ಎಂದು ದೂರಿದರು.

ಆತ್ಮಹತ್ಯೆ ಮಾಡಿಕೊಂಡ್ರು...

ನಾನು ಚೀಟಿ ಹಣ ಕಟ್ಟಿದ್ದೆ. ಹಣವನ್ನು ವಾಪಸ್ ಕೊಡಿಸದೆ ಇದ್ದಾಗ ಬೇಸರಗೊಂಡು ನನ್ನ ಗಂಡ ನೀರಿಗೆ ಬಿದ್ದು ಸತ್ತು ಹೋದರು ಎಂದು ಉಪ್ಪಿನಮೋಳೆಯ ಸುಶೀಲಾ ಕಣ್ಣೀರು ಹಾಕಿದರು. ನನ್ನ ಗಂಡ ಸತ್ತು ಹೋದ ಮೇಲೂ ಹಣ ವಾಪಸ್ ಕೊಡಲಿಲ್ಲ. ದಯವಿಟ್ಟು ಹಣ ವಾಪಸ್ ಕೊಡಿಸಿ ಎಂದು ಕೇಳಿಕೊಂಡರು.

ಉಪ್ಪಿನಮೋಳೆ ಗ್ರಾಮದ ನಾಗಮ್ಮ ಮಾತನಾಡಿ, ನಾನು ಬೇರೆ ಕಡೆ ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಚೀಟಿಗೆ ಹಣ ಕಟ್ಟಿದ್ದೆ. ಈ ವಿಷಯವನ್ನು ಗಂಡ-ಮಕ್ಕಳಿಗೆ ಹೇಳದೆ ಮಾಡಿದ್ದೆ. ಹಣ ವಾಪಸ್ ಕೊಡದೆ ಇದ್ದಾಗ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದೆ ಎಂದರು.

ಹಬ್ಬಕ್ಕೊಂದು ಚೀಟಿ... ಪ್ರತಿ ಹಬ್ಬಕ್ಕೊಂದು ಚೀಟಿ ಹಾಕಿ ಅದಕ್ಕೆ ಹಣ ಕಟ್ಟಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯರ ಬಳಿ ಹಣ ಕಟ್ಟಿದ ಕೈ ಬರಹದ ಚೀಟಿಗಳು ಇದ್ದವು. ಅದರಲ್ಲಿ ಚಿಕ್ಕಲ್ಲೂರು ಕಂತು, ಶಿವರಾತ್ರಿ ಕಂತು, ಯುಗಾದಿ ಕಂತು, ದೇವರ ಹಬ್ಬದ ಕಂತು..ಹೀಗೆ ಹಲವು ಹಬ್ಬಗಳಿಗೆ ಹಣ ಕಟ್ಟಿಸಿಕೊಂಡು ವಾಪಸ್ ಹಣ ಕೊಟ್ಟಿಲ್ಲ ಎಂದು ಕೆಲವು ತಿಂಗಳ ಹಿಂದೆ ಯಳಂದೂರು ಪೊಲೀಸ್ ಠಾಣೆಗೆ ಮಹಿಳೆಯರು ಬಂದು ದೂರು ನೀಡಿದ್ದರು.

ನಮ್ಮೂರಿನವರೇ ಇಬ್ಬರು ಮಹಿಳೆಯರು 200ಕ್ಕೂ ಹೆಚ್ಚು ಮಹಿಳೆಯರ ಬಳಿ ಚೀಟಿ ಹಣ ಕಟ್ಟಿಸಿಕೊಂಡು ಭಾರಿ ಮೋಸ ಮಾಡಿಬಿಟ್ಟಿದ್ದಾರೆ. ಒಂದಕ್ಕೆ ಮೂರರಷ್ಟು ಹಣ ಕೊಡುವುದಾಗಿ ವಂಚನೆ ಮಾಡಿದ್ದಾರೆ. ಕೊನೆಗೆ ಬಡ್ಡಿ ಬೇಡ, ಅಸಲನ್ನೂ ಕೊಟ್ಟಿಲ್ಲ. ಪೊಲೀಸರು ಈ ಬಗ್ಗೆ ಕ್ರಮವಹಿಸಬೇಕು. ಸಿ.ಪುಟ್ಟರಂಗಶೆಟ್ಟಿ ಶಾಸಕ ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net