ಚಿಲ್ಲರೆ ಅಂಗಡಿಗಳ ಮೇಲೆ ದಿಢೀರ್ ದಾಳಿ

HUN-JAN-10-1(HEALTH DEPT RAID)
ಹುಣಸೂರು ನಗರದ ವಿವಿಧೆಡೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಚಿಲ್ಲರೆ ಅಂಗಡಿಗಳ ಮಾಲೀಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಕುರಿತು ಅರಿವು ಮೂಡಿಸಲಾಯಿತು. ರಾಜೇಶ್ವರಿ, ಶಿವಕುಮಾರ್, ನವೀದುಲ್ಲಾ ಷರೀಫ್ ಇತರರಿದ್ದರು.
Published on

ಹುಣಸೂರು: ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಗರದ ವಿವಿಧೆಡೆ ಚಿಲ್ಲರೆ ಅಂಗಡಿಗಳ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿ 2600 ರೂ. ದಂಡ ವಸೂಲಿ ಮಾಡುವ ಜತೆಗೆ ತಂಬಾಕನ್ನು ವಶಕ್ಕೆ ಪಡೆಯಲಾಯಿತು.

ಕಾನೂನು ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಮಾರಾಟದ ವೇಳೆ ಅನುಸರಿಸಬೇಕಾದ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾತನಾಡಿ, ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ನಾಮಫಲಕ ಅಳವಡಿಕೆ, 18 ವರ್ಷದೊಳಗಿನ ಮಕ್ಕಳಿಗೆ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು, ಮಳಿಗೆಯಲ್ಲಿ ಧೂಮಪಾನ ಕುರಿತಾಗಿನ ಎಚ್ಚರಿಕೆ ಫಲಕ ಅಳವಡಿಸದಿರುವುದು ಸೇರಿದಂತೆ ಕಾನೂನು ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಎರಡನೇ ಮಂಗಳವಾರ ಈ ರೀತಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ತಂಬಾಕು ನಿಯಂತ್ರಣ ಕೋಶ ವಿಭಾಗದ ಸಂಯೋಜನಾಧಿಕಾರಿ ಶಿವಕುಮಾರ್, ಶಾಲಾ ಕಾಲೇಜುಗಳ ಆವರಣದಿಂದ 100 ಮೀ ದೂರದ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ್ದು, ಸಾರ್ವಜನಿಕರು ಸಹಕರಿಸಿದ್ದಲ್ಲಿ ಮಾತ್ರ ಮಾಲಿನ್ಯ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆ ಸಾಧ್ಯ ಎಂದು ಹೇಳಿದರು.

ದಾಳಿ ವೇಳೆ ಹಿರಿಯ ಆರೋಗ್ಯಾಧಿಕಾರಿ ಚಂದ್ರಶೇಖರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸಾಮಾಜಿಕ ಕಾರ್ಯಕರ್ತ ನವೀದುಲ್ಲಾ ಷರೀಫ್, ಹಿರಿಯ ಆರೋಗ್ಯ ನಿರೀಕ್ಷಕ ವಿಶ್ವನಾಥ್, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ, ತೋಟಗಾರಿಕೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net