ಚಿಲುಗೋಡು ಏತ ನೀರಾವರಿ ಯೋಜನೆ ಜಾರಿಗೊಳಿಸಿ

09. HBH. 5
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಲುಗೋಡು ಗ್ರಾಮಕ್ಕೆ ಏತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕ ಕೆ.ನೇಮಿರಾಜ್ ನಾಯ್ಕಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಸಂಘದ ವಿಭಾಗೀಯ ಕಾರ್ಯದರ್ಶಿ ಕೆ.ಗೋಣಿಬಸಪ್ಪ ಮಾತನಾಡಿ, ಪುನರ್ವಸತಿ ಗ್ರಾಮ ಚಿಲಗೋಡು ಗ್ರಾಮಕ್ಕೆ ಏತ ನೀರಾವರಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಗ್ರಾಮದಿಂದ ಪಟ್ಟಣದ ಬಸವೇಶ್ವರ ವೃತ್ತದವರೆ ಪಾದಯಾತ್ರೆ ನಡೆಸಿ ನಿಮಗೆ ಮನವಿ ಸಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ಮನವಿ ಸಲ್ಲಿಸುವುದರೊಂದಿಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಏಣಗಿ ಏತ ನೀರಾವರಿ ಪಂಪ್ ಹೌಸ್ ಬಿದ್ದಿದ್ದು, ಅದನ್ನು ಸರಿಪಡಿಸಬೇಕು. ಒಂದು ವಾರದೊಳಗೆ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ. ಹಗರಿಬೊಮ್ಮನಹಳ್ಳಿ ಬಂದ್‌ಗೂ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಏತ ನೀರಾವರಿ ಯೋಜನೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿರುವೆ. ಯೋಜನೆ ಜಾರಿಯಾಗುವವರೆಗೂ ನಿಮ್ಮೊಂದಿಗೆ ನಾನೂ ಹೋರಾಟ ಮಾಡುವೆ ಎಂದರು.

ಪ್ರಮುಖರಾದ ಕಿತ್ತೂರ್ ನಾಗಪ್ಪ, ಎನ್.ವೀರಣ್ಣ, ಹಲಗೇರಿ ಮಹೇಶ್, ಹನುಮರೆಡ್ಡಿ ಹಡಗಲಿ, ಹೊಸಮನಿ ಸಿದ್ದಪ್ಪ, ಶಿವರಾಜ ಹೊಳಗುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net