ಚಿರತೆಗೆ ನಾಯಿ, ಕರು ಬಲಿ

04-GPT-1-
ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದ ಜಮೀನಿನಲ್ಲಿ ಕಂಡು ಬಂದ ಚಿರತೆ ಹೆಜ್ಜೆಗುರುತು.
Published on

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ಜನನಿಬಿಡ ಪ್ರದೇಶದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ತಾಲೂಕಿನ ಬೇಗೂರು ಸಮೀಪದ ಬೆಳಚಲವಾಡಿ ಗ್ರಾಮದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದ ಮನೆಗೆ ಮಂಗಳವಾರ ನಸುಕಿನಲ್ಲಿ ಚಿರತೆ ಸಾಕುನಾಯಿಯನ್ನು ಕೊಂದು ಹಾಕಿದೆ. ಅಲ್ಲದೇ, ಬೊಮ್ಮಲಾಪುರ ಗ್ರಾಮದ ಕೆಂಡಗಣ್ಣಸ್ವಾಮಿ ಎಂಬುವರ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ವರ್ಷದ ಕರುವನ್ನು ತಿಂದು ಹಾಕಿದೆ.

ಕಳೆದ ಕೆಲವು ದಿನಗಳಿಂದ ತಾಲೂಕಿನ ಹಲವಾರು ಭಾಗಗಳಲ್ಲಿ ಚಿರತೆಗಳ ದಾಳಿಗೆ ನೂರಾರು ಸಾಕುಪ್ರಾಣಿಗಳು ಬಲಿಯಾಗಿವೆ. ತಾಲೂಕಿನ ಕುಂದಕೆರೆ, ರಾಘವಾಪುರ, ಶೀಲವಂತಪುರ, ಮಾದಾಪಟ್ಟಣ, ಮಡಹಳ್ಳಿ, ಹಕ್ಕಲಪುರ, ಬಸಾಪುರ, ನೇನೆಕಟ್ಟೆ, ಬೆಟ್ಟದ ಮಾದಹಳ್ಳಿ, ಕೊಡಗಾಪುರ ಗ್ರಾಮಗಳಲ್ಲಿ ಪದೇ ಪದೆ ಚಿರತೆ ದಾಳಿ ಪ್ರಕರಣಗಳು ಹೆಚ್ಚುತ್ತಿದೆ. ಇತ್ತೀಚೆಗೆ ಪಟ್ಟಣದ ಮಹದೇವಪ್ರಸಾದ್‌ನಗರ, ಅಗ್ನಿಶಾಮಕ ಠಾಣೆಯ ಹಿಂಭಾಗದಲ್ಲಿಯೂ ಹಸು ಕರು ಹಾಗೂ ನಾಯಿಗಳನ್ನು ತಿಂದು ಹಾಕಿವೆ. ಇದರಿಂದ ಸಾರ್ವಜನಿಕರು ಹಾಗೂ ಜಮೀನುಗಳಲ್ಲಿ ನೆಲೆಸಿರುವ ರೈತರಿಗೆ ಆತಂಕ ಮನೆ ಮಾಡಿದೆ.

ಬಫರ್ ವಲಯದಲ್ಲಿ ಎರಡು ಬೋನುಗಳಿದ್ದು, ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಲ್ಲಿ ಇಡಲಾಗುತ್ತಿದೆ. ಹೆಚ್ಚು ಅಗತ್ಯವಿದ್ದರೆ ಅಕ್ಕಪಕ್ಕದ ವಲಯಗಳಿಂದ ಪಡೆದುಕೊಳ್ಳಲಾಗುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ 4 ಬೋನುಗಳನ್ನು ಒದಗಿಸುವಂತೆ ಕೋರಲಾಗಿದೆ.
ಎನ್.ಪಿ.ನವೀನ್ ಕುಮಾರ್ ಆರ್‌ಎಫ್‌ಒ, ಬಫರ್ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net