ಚಿರತೆಗಾಗಿ 80 ಲಕ್ಷ ರೂ. ಖರ್ಚು

04Jaggu4
ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಭಾನುವಾರ ಚಿರತೆ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು.
Published on

ಬೆಳಗಾವಿ: ನಗರದ ಗಾಲ್ಫ್ ಮೈದಾನದ ಕಾಡಿನಲ್ಲಿ ಆ.5ರಂದು ಪ್ರತ್ಯಕ್ಷವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಅರಣ್ಯ ಇಲಾಖೆ ಭಾನುವಾರ ಕೈಗೊಂಡಿದ್ದ ಮತ್ತೊಂದು ಬೃಹತ್ ಶೋಧ ಕಾರ್ಯಾಚರಣೆ ವಿಫಲವಾಯಿತು.

ಚಿರತೆ ಹಿಡಿಯುವ ಕಾರ್ಯಾಚರಣೆ ಭಾನುವಾರಕ್ಕೆ 31 ದಿನ ಪೂರೈಸಿದೆ. ಪ್ರತಿದಿನ ಅಂದಾಜು 2.50 ಲಕ್ಷ ರೂ. ನಿಂದ 3 ಲಕ್ಷ ರೂ. ಖರ್ಚು ಮಾಡಲಾಗಿದ್ದು, 31 ದಿನಗಳಲ್ಲಿ ಅರಣ್ಯ ಇಲಾಖೆ ಬರೊಬ್ಬರಿ 80 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದೆ. ಇಷ್ಟೆಲ್ಲ ಹಣ ವ್ಯಯಿಸಿದರೂ ಚಿರತೆ ಸೆರೆಯಾಗದಿರುವುದು ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದೆ. ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಒಟ್ಟು 160 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅವರಿಗೆ ನಿತ್ಯ ಊಟ, ಉಪಾಹಾರ, ವಾಹನಗಳಿಗೆ ಡೀಸೆಲ್, 6 ಜೆಸಿಬಿಗಳ ಬಾಡಿಗೆ ಹಾಗೂ ಆ. 24ರಿಂದ ಈವರೆಗೆ ಕಾರ್ಯಾಚರಣೆಯಲ್ಲಿ ಎರಡು ಆನೆಗಳು ಭಾಗಿಯಾಗಿವೆ. ಅವುಗಳ ಆಹಾರ ಸೇರಿ ನಿತ್ಯ ಅಂದಾಜು 2.50 ಲಕ್ಷ ರೂ.ನಿಂದ 3 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ಅರಣ್ಯ ಇಲಾಖೆಯ ಅನುದಾನದಲ್ಲಿಯೇ ಖರ್ಚು ಮಾಡಲಾಗಿದೆ. ಇಷ್ಟೆಲ್ಲ ಹಣ ವ್ಯಯವಾದರೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯುತ್ತಿಲ್ಲ ಎಂದು ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.

250 ಸಿಬ್ಬಂದಿ ಭಾಗಿ: ಆ. 22ರಂದು (14 ದಿನಗಳ ಹಿಂದೆ) ಕಾರ್ಯಾಚರಣೆ ವೇಳೆ ಸಿಬ್ಬಂದಿ ಬಲೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಚಿರತೆ ಮತ್ತೆ ತನ್ನ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಅರಣ್ಯ ಹಾಗೂ ಪೊಲೀಸ್ ಇಲಾಖೆ 250 ಸಿಬ್ಬಂದಿ ಸಹಿತ ಭಾನುವಾರ ಮತ್ತೊಮ್ಮೆ ಬೃಹತ್ ಕಾರ್ಯಾಚರಣೆ ನಡೆಸಿದರೂ ಚಿರತೆ ಇರುವಿಕೆ ಪತ್ತೆಯಾಗಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಆದರೆ, ಗಾಲ್ಫ್ ಮೈದಾನ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿ, ಬೋನು ಇಟ್ಟು ಕೆಲ ಸಿಬ್ಬಂದಿ ನಿಗಾ ವಹಿಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯತ್ನ ಫಲ ನೀಡಲಿಲ್ಲ: ಬೆಳಗಾವಿಗೆ ಬಂದಿರುವುದು ಗಂಡು ಚಿರತೆ ಎಂದು ಗೊತ್ತಾದ ತಕ್ಷಣ ಅದನ್ನು ಹಿಡಿಯುವುದಕ್ಕೆ ಲೈಂಗಿಕ ಆಕರ್ಷಣೆ ಮಾಡಲು ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯದಲ್ಲಿರುವ ಹೆಣ್ಣು ಚಿರತೆ ಮೂತ್ರ ಸಿಂಪಡಣೆ ತಂತ್ರ ಬಳಸಿ ಸೆರೆ ಹಿಡಿಯಲು ಅಧಿಕಾರಿಗಳು ಪ್ರಯತ್ನಿಸಿದರು. ನಾಯಿ, ಹಂದಿ ಕಟ್ಟಿದರು. ಜತೆಗೆ ಆನೆಗಳು, ಜೆಸಿಬಿಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದರೂ ಕೈಗೂಡಲಿಲ್ಲ. ಎರಡು ದಿನಗಳ ಹಿಂದೆ ತಾಲೂಕಿನ ಮಂಡೋಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಜನರು ತಿಳಿಸಿದ್ದಾರೆ. ಜತೆಗೆ ಅಧಿಕಾರಿಗಳು ಅಳವಡಿಸಿದ ಕ್ಯಾಮರಾಗಳಲ್ಲಿ 10 ದಿನಗಳಿಂದ ಚಿರತೆ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಚಿರತೆ ಬೆಳಗಾವಿ ಗಾಲ್ಫ್ ಮೈದಾನದ ಕಾಡಿನಿಂದ ಬೇರೆಡೆ ತೆರಳಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಿಪರ್ಯಾಸವೆಂದರೆ ಈಗಲೂ ಚಿರತೆಯ ಬಗ್ಗೆ ಸ್ಪಷ್ಟತೆ ಸಿಗದ ಕಾರಣ ಆತಂಕ ಹಾಗೆಯೇ ಮುಂದುವರಿದಿದೆ.

22 ಶಾಲೆಗಳು ಆರಂಭ

ಚಿರತೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ರಜೆ ನೀಡಲಾಗಿದ್ದ 22 ಶಾಲೆಗಳು ಸೆ.5ರಿಂದ ಯಥಾಪ್ರಕಾರ ಆರಂಭಗೊಳ್ಳಲಿವೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ತಿಳಿಸಿದ್ದಾರೆ. ಬೆಳಗಾವಿ ನಗರ ಹಾಗೂ ಗ್ರಾಮೀಣ ವಲಯದ 22 ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದೀಗ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಯಥಾಪ್ರಕಾರ ಶಾಲೆಗಳು ಕಾರ್ಯ ನಿರ್ವಹಿಸಲಿವೆ. ಪಾಲಕರು ಹಾಗೂ ಶಾಲೆಗಳು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಹಬ್ಬ ಕಸಿದುಕೊಂಡ ಚೀತಾ

ಗಣೇಶ ಹಬ್ಬ ಆಚರಣೆ ಮೂಡನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಕೊಳ್ಳಿ ಇಟ್ಟಿದೆ. ರಜೆ ಇಲ್ಲದೆ 31 ದಿನಗಳ ಕಾಲ ಕಾರ್ಯಾಚರಣೆಯಲ್ಲಿ ತೊಡಗಿ ಹಬ್ಬದಿಂದ ವಂಚಿತರಾಗಿದ್ದೇವೆ ಎಂದು ಸಿಬ್ಬಂದಿ ಗೊನಗುತ್ತಿದ್ದರು.

ಕಳೆದ 10 ದಿನಗಳಿಂದ ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಚಿರತೆ ಇರುವ ಕುರುಹುಗಳು ಪತ್ತೆಯಾಗಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಗಾಲ್ಫ್ ಮೈದಾನದ ಸುತ್ತ ಬೋನುಗಳು, ಕ್ಯಾಮರಾಗಳನ್ನಿಟ್ಟು ನಿಗಾ ವಹಿಸಲಿದ್ದಾರೆ. ಈ ಪ್ರದೇಶದಲ್ಲಿ ಯಾರೂ ಒಬ್ಬಂಟಿಗರಾಗಿ ಸಂಚರಿಸಬಾರದು.| ಅಂಥ್ಯೋನಿ ಮರೆಯಮ್ ಡಿಎಫ್‌ಒ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net