ಚಿರತೆಗಳ ಓಡಾಟ, ಜನರಲ್ಲಿ ಆತಂಕ

IMG
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗೆ ಡ್ರೋನ್ ಕ್ಯಾಮರಾ ಕಾರ್ಯಾಚರಣೆ ಆರಂಭಿಸಿರುವ ಅಧಿಕಾರಿಗಳು.
Published on

ಬೆಳಗಾವಿ/ ಮೂಡಲಗಿ: ಬೆಳಗಾವಿ ನಗರದ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಮಾಡುತ್ತಿರುವ ಬೆನ್ನಲ್ಲೇ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜಿಲ್ಲೆಯಲ್ಲಿ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.

ಆರು ದಿನಗಳ ಹಿಂದೆ ಬೆಳಗಾವಿ ಜಾಧವ ನಗರ ಜನವಸತಿ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಪೊದೆ ಒಳಗೆ ಹೋಗಿದ್ದ ಚಿರತೆಯ ಚಿತ್ರ ಆ.9ರಂದು ಗಾಲ್ಫ್ ಮೈದಾನದಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಚಿರತೆ ಪತ್ತೆಯಾಗಿಲ್ಲ. ಇದೀಗ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳಿ ಎಂಬುವರ ತೋಟದ ಮನೆಯ ಮುಂದೆ ಕಟ್ಟಿರುವ ಎಮ್ಮೆ ಕರುವನ್ನು ಚಿರತೆ ತೆಗೆದುಕೊಂಡು ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತಂಕ ತಂದೊಡ್ಡಿದೆ. ಮೂಡಲಗಿ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಗಳಿಗಳನ್ನು ಪರಿಶೀಲಿಸಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸುತ್ತಮುತ್ತಲಿನ ಕಬ್ಬಿನ ಗದ್ದೆಯಲ್ಲಿಯೇ ಚಿರತೆ ಅವಿತುಕೊಂಡಿದೆ. ಹಾಗಾಗಿ ಧರ್ಮಟ್ಟಿ, ಮಸಗುಪ್ಪಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ ಗ್ರಾಮಗಳ ಸಾರ್ವಜನಿಕರು ಒಬ್ಬಂಟಿಯಾಗಿ ಗದ್ದೆ ಕಡೆಗೆ ಹೋಗಬಾರದು. ಈ ಪ್ರದೇಶದ ಸುತ್ತಮುತ್ತಲಿನ ಎಲ್ಲ ಶಾಲೆಗಳಿಗೆ ಶುಕ್ರವಾರ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ತಾಲೂಕು ತಹಸೀಲ್ದಾರ್ ಡಿ.ಜಿ.ಮಹಾತ್ ತಿಳಿಸಿದರು.

ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಮಕ್ಕಳು, ಜನರು ಒಬ್ಬಂಟಿಯಾಗಿ ಓಡಾಡಬಾರದು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿದ್ದು, ಗ್ರಾಮಸ್ಥರು ಸಹಕರಿಸಬೇಕು. ಸುತ್ತಮುತ್ತಲಿನ ಗ್ರಾಮಸ್ಥರಿಗೆ, ರೈತರಿಗೆ ಚಿರತೆ ಪ್ರತ್ಯೇಕ್ಷವಾಗಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು ಅಧಿಕಾರಿಗಳು ಜಾಗೃತಿ ಮೂಡಿಸಬೇಕು.| ಬಾಲಚಂದ್ರ ಜಾರಕಿಹೊಳಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net