ಚಿರತೆ ಹಾವಳಿಯಿಂದ ನಲುಗಿದ ರೈತರು

10 HANUR 1 A
Published on

ಹನೂರು: ತಾಲೂಕಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳು ಆಗಾಗ್ಗೆ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿರುವುದು ಒಂದೆಡೆಯಾದರೆ, ಇತ್ತ ಅಜ್ಜೀಪುರ ಭಾಗದ ಗ್ರಾಮಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಪದೇ ಪದೆ ಮೇಕೆಗಳು ಬಲಿಯಾಗುತ್ತಿವೆ. ರೈತರು ಆತಂಕಕ್ಕೆ ಒಳಗಾಗಿದ್ದು, ರೋಸಿ ಹೋಗಿದ್ದಾರೆ. ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಲ್ಲಿ ನಿರ್ಲಕ್ಷ್ಯ ವಹಿಸಿದೆ.

ಜಿಲ್ಲೆಯಲ್ಲಿಯೇ ಹನೂರು ತಾಲೂಕು ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, ಬಹುತೇಕ ಗ್ರಾಮಗಳು ಕಾಡಂಚಿನಿಂದ ಆವೃತವಾಗಿದೆ. ಇಲ್ಲಿನ ರೈತರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಮೇವನ್ನು ಅರಸಿ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ತಿಂದು, ತುಳಿದು ನಾಶಪಡಿಸುತ್ತಿವೆ. ಜತೆಗೆ ಸೋಲಾರ್ ಬೇಲಿ ಹಾಗೂ ಕೃಷಿ ಪರಿಕರಗಳನ್ನು ತುಳಿದು ಹಾನಿ ಮಾಡುತ್ತಿವೆ. ಇದರಲ್ಲಿ ಮಲ್ಲಯ್ಯನಪುರ, ಬೈಲೂರು, ರಾಮಾಪುರ ಹಾಗೂ ಈ ಭಾಗದ ಇನ್ನಿತರ ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರೈತರು ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದ್ದು, ಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕೃಷಿ ಕಾಯಕದಲ್ಲಿ ತೊಡಗಲು ಹಿಂದೇಟು:

ಹೀಗಿರುವಾಗ ಕಳೆದ ನಾಲ್ಕೈದು ತಿಂಗಳಿನಿಂದ ಅಜ್ಜೀಪುರ ಭಾಗದ ಗ್ರಾಮಗಳಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು, ಜಮೀನಿನ ಕೊಟ್ಟಿಗೆಗಳ ಮೇಲೆ ದಾಳಿ ನಡೆಸಿ ಮೇಕೆ ಹಾಗೂ ನಾಯಿಗಳನ್ನು ಬಲಿ ಪಡೆಯುತ್ತಿವೆ. ಚಿರತೆ ಭಯದಿಂದ ರೈತರು ಕಂಗಾಲಾಗಿದ್ದು, ಪರಿಪೂರ್ಣ ಕೃಷಿ ಕಾಯಕದಲ್ಲಿ ತೊಡಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಹಾಗೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಮೀನಮೇಷ ಎಣಿಸುತ್ತಿದ್ದು, ಈ ಬಗ್ಗೆ ರೈತರಿಂದ ಅಸಮಾಧಾನ ವ್ಯಕ್ತವಾಗಿದೆ.

ಬಲಿಯಾಗುತ್ತಿವೆ ಮೇಕೆಗಳು:

ಅಜ್ಜೀಪುರ ಭಾಗದ ಬಸಪ್ಪನದೊಡ್ಡಿ, ಗಂಗನದೊಡ್ಡಿ, ಕಾಂಚಳ್ಳಿ, ಜಿ.ಆರ್.ನಗರ, ಗುಂಡಾಪುರ, ದೊಮ್ಮನಗದ್ದೆ ಹಾಗೂ ಈ ಭಾಗದಲ್ಲಿ ಕಳೆದ ಐದಾರು ತಿಂಗಳಿನಿಂದ ಚಿರತೆಯೊಂದರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಆಗಾಗ್ಗೆ ಜಮೀನಿನ ಕೊಟ್ಟಿಗೆಯ ಮೇಲೆ ದಾಳಿ ನಡೆಸುತ್ತಿದ್ದು, ಕಳೆದ ಒಂದು ವಾರದಿಂದೀಚೆಗೆ ತನ್ನ ಚಾಳಿಯನ್ನು ಮುಂದುವರಿಸಿದೆ. ಈವರೆಗೂ ಸುಮಾರು 30ಕ್ಕೂ ಹೆಚ್ಚು ಮೇಕೆಗಳು ಬಲಿಯಾಗಿವೆ. ಜತೆಗೆ 25ಕ್ಕೂ ಹೆಚ್ಚು ನಾಯಿಗಳು ಕಣ್ಮರೆಯಾಗಿದೆ. ಇಂತಹ ಘಟನೆಗಳು ಪದೇ ಪದೆ ಮರುಕಳಿಸುತ್ತಲೇ ಇದೆ. ಇದರಿಂದ ಭಯದ ವಾತಾವರಣದಲ್ಲಿ ದಿನದೂಡುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಚಿರತೆಯದ್ದೇ ಒಂದು ದೊಡ್ಡ ಸಮಸ್ಯೆ:

ಈ ಭಾಗದಲ್ಲಿ ಕಳೆದ ಐದಾರು ತಿಂಗಳಿನಿಂದ ಮೇಕೆ ಹಾಗೂ ನಾಯಿಗಳನ್ನು ಬಲಿ ಪಡೆದು ತನ್ನ ಕ್ರೌರ್ಯ ಮುಂದುವರಿಸುತ್ತಿರುವ ಚಿರತೆಯ ಭಯಕ್ಕೆ ರೈತರು ಹೈರಾಣಾಗಿದ್ದಾರೆ. ಇದರಿಂದ ಕಾಡಂಚಿನ ಜಮೀನುಗಳಿಗೆ ಒಂಟಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಸಂಜೆಯಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಾವಲು ಕಾಯಲು ತೆರಳುತ್ತಿದ್ದ ರೈತರು ರಾತ್ರಿ ವೇಳೆ ಜಮೀನಿಗೆ ತೆರಳುತ್ತಿಲ್ಲ. ಈ ಭಾಗದಲ್ಲಿ ಉಡುತೊರೆ ಹಳ್ಳ ಜಲಾಶಯ ಇರುವುದರಿಂದ ನೀರಾವರಿ ಸೌಕರ್ಯ ಉತ್ತಮವಾಗಿದೆ. ಆದರೆ ಚಿರತೆ ಭಯದಿಂದ ರೈತರು ಪರಿಪೂರ್ಣವಾಗಿ ಕೃಷಿ ಕಾಯಕದಲ್ಲಿ ತೊಡಗಲು ತೊಡಕಾಗಿ ಪರಿಣಮಿದೆ. ಹಾಗಾಗಿ ಈ ಭಾಗದಲ್ಲಿ ಚಿರತೆಯದ್ದೆ ರೈತರಿಗೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಚಿರತೆ ಸೆರೆ ಹಿಡಿಯುವಲ್ಲಿ ನಿರ್ಲಕ್ಷ್ಯ:

ಚಿರತೆ ದಾಳಿಗೆ ಮೇಕೆಗಳು ಆಗಾಗ್ಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ತಾಲೂಕು ರೈತ ಸಂಘ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ರೈತರ ಸಹಕಾರ ಪಡೆದು ಕಳೆದ ಮೂರು ತಿಂಗಳ ಹಿಂದೆ ಚಿರತೆ ಸೆರೆ ಹಿಡಿಯಲು ಅಲ್ಲಲ್ಲಿ ಬೋನು ಇರಿಸಲಾಗಿದೆ. ಆರಂಭದಲ್ಲಿ ಇಲಾಖೆಯ ಸಿಬ್ಬಂದಿ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದರು. ಆದರೆ ಚಾಲಾಕಿ ಚಿರತೆ ಬೋನಿಗೆ ಬೀಳುತ್ತಿರಲಿಲ್ಲ. ಕೆಲ ದಿನಗಳು ಜನರ ಕಣ್ಣಿಗೆ ಕಾಣಿಸಿಕೊಂಡ ಚಿರತೆ ಮತ್ತೆ ಕೆಲ ದಿನಗಳಲ್ಲಿ ಕಣ್ಮರೆಯಾಗುತ್ತಿತ್ತು. ಇದರಿಂದ ಚಿರತೆ ಸೆರೆ ಹಿಡಿಯುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಪರಿಣಾಮ ಕಳೆದ ತಿಂಗಳು ಕಾಂಚಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಕುದುರೆಯೊಂದು ಬಲಿಯಾಗಿದ್ದರೆ, ಇತ್ತೀಚೆಗೆ ಜಿ.ಆರ್. ನಗರದಲ್ಲಿ ಮೇಕೆ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಕಾಂಚಳ್ಳಿ ಹಾಗೂ ಬಸಪ್ಪನದೊಡ್ಡಿಯ ಜಮೀನಿಗೆ ಕೊಟ್ಟಿಗೆಗೆ ಲಗ್ಗೆ ಇಟ್ಟ ಚಿರತೆ ಮೇಕೆಗಳನ್ನು ಬಲಿ ಪಡೆದಿದೆ. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರಷ್ಟೇ. ಆದರೆ ಚಿರತೆ ಸೆರೆ ಹಿಡಿಯುವಲ್ಲಿ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂಬುದು ರೈತ ಆರೋಪವಾಗಿದೆ.

ಪ್ರತಿಭಟನೆಗೆ ನಿರ್ಧಾರ:

ಚಿರತೆ ದಾಳಿಯಿಂದ ಮೇಕೆ ಹಾಗೂ ನಾಯಿಗಳು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಬೋನು ಇರಿಸಿರುವುದು ಮೆಚ್ಚುಗೆ ಸಂಗತಿ. ಆದರೆ 3 ತಿಂಗಳು ಕಳೆದರೂ ಚಿರತೆ ಸೆರೆ ಹಿಡಿಯದಿರುವುದು ಎಷ್ಟರ ಮಟ್ಟಿಗೆ ಸರಿ? ಅಧಿಕಾರಿ ಹಾಗೂ ಸಿಬ್ಬಂದಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ರೈತರು ಭಯದಲ್ಲೇ ದಿನ ದೂಡುವಂತಾಗಿದೆ. ಜತೆಗೆ ಸಮರ್ಪಕವಾಗಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕು ರೈತ ಸಂಘ ಸದ್ಯದಲ್ಲಿಯೇ ರೈತರ ಜತೆಗೂಡಿ ಅರಣ್ಯ ಇಲಾಖೆಯ ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಭಾಗದಲ್ಲಿ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಚಿರತೆಯದ್ದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ರಾತ್ರಿ ವೇಳೆ ಆಗಾಗ್ಗೆ ಜಮೀನಿನ ಕೊಟ್ಟಿಗೆಯ ಮೇಲೆ ದಾಳಿ ನಡೆಸಿ ಮೇಕೆಗಳನ್ನು ಬಲಿ ಪಡೆಯುತ್ತಲೇ ಇದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದ್ದರೂ ಚಿರತೆ ಸೆರೆ ಹಿಡಿಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ರೈತರು ತುಂಬ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಸಂಬಂಧ ಸದ್ಯದಲ್ಲಿಯೇ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ.

ಅಮ್ಜಾದ್ ಖಾನ್, ಅಧ್ಯಕ್ಷ, ತಾಲೂಕು ರೈತ ಸಂಘ ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net