

ಚಾಮರಾಜನಗರ : ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಇತ್ತೀಚಿನ ದಿನಗಳಲ್ಲಿ ಪಟ್ಟಣ ಮತ್ತು ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳನ್ನು ಪ್ರವೇಶಿಸುತ್ತಿವೆ. ಜನರು ವಾಸಿಸುತ್ತಿರುವ ಮನೆಗಳ ಬಳಿಯೇ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದಲೂ ಪಟ್ಟಣಕ್ಕೆ ಹೊಂದಿಕೊಂಡಿರುವ ಜೆಎಸ್‌ಎಸ್, ಅಶ್ವಿನಿ ಬಡಾವಣೆ, ಮಹದೇವಪ್ರಸಾದ್ ನಗರಗಳ ಮನೆಗಳ ಬಳಿ ಕಟ್ಟಿ ಹಾಕಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿದೆ. ಅಗ್ನಿಶಾಮಕ ದಳದ ಕಚೇರಿ, ಚಿಕ್ಕಕೆರೆ ಸುತ್ತಮುತ್ತ ಪದೇ ಪದೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಳೆದ 15 ದಿನಗಳ ಹಿಂದೆಯೇ ಬೋನು ಅಳವಡಿಸಿದೆ. ಆದರೆ ಚಾಲಾಕಿ ಚಿರತೆ ಬೋನಿನತ್ತ ಸುಳಿಯದೆ ತಪ್ಪಿಸಿಕೊಳ್ಳುತ್ತಿದೆ.
ಆ.8ರಂದು ಮಧ್ಯಾಹ್ನ ಹಾಡಹಗಲೇ ತಾಲೂಕಿನ ಪಡಗೂರು ಗ್ರಾಮದ ಮದ್ದಾನಪ್ಪ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಹಸುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಗರ್ಭಿಣಿ ಹಸು ಸ್ಥಳದಲ್ಲೇ ಸಾವಿಗೀಡಾಗಿ, ಎರಡು ಹಸುಗಳಿಗೆ ತೀವ್ರ ಗಾಯಗಳಾಗಿದೆ. ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಉಳಿಸಲು ಪಶು ವೈದ್ಯರು ಆಪರೇಷನ್ ಮಾಡಿದರೂ ಕರು ಬದುಕಲಿಲ್ಲ.
ತಾಲೂಕಿನ ಕುಂದಕೆರೆ, ರಾಘವಾಪುರ, ಶೀಲವಂತಪುರ, ಮಾದಾಪಟ್ಟಣ, ಮಡಹಳ್ಳಿ, ಹಕ್ಕಲಪುರ, ಬಸಾಪುರ, ನೇನೆಕಟ್ಟೆ, ಬೆಟ್ಟದ ಮಾದಹಳ್ಳಿ, ಕೊಡಗಾಪುರ ಗ್ರಾಮಗಳಲ್ಲಿ ಪದೇ ಪದೆ ಚಿರತೆಗಳ ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಇತ್ತೀಚೆಗೆ ಪಟ್ಟಣದ ಮಹದೇವಪ್ರಸಾದ್ ನಗರ, ಅಗ್ನಿಶಾಮಕ ಠಾಣೆಯ ಹಿಂಭಾಗದಲ್ಲಿಯೂ ಹಸು, ಕರು ಹಾಗೂ ನಾಯಿಗಳನ್ನು ತಿಂದು ಹಾಕಿವೆ. ಇದರಿಂದ ಸಾರ್ವಜನಿಕರಲ್ಲಿ ಹಾಗೂ ಜಮೀನುಗಳಲ್ಲಿ ನೆಲೆಸಿರುವ ರೈತರಿಗೆ ಆತಂಕ ಉಂಟಾಗಿದೆ.
ಅರಣ್ಯ ಇಲಾಖೆ ಪ್ರತಿ ವಲಯಗಳಿಗೂ ಎರಡರಿಂದ ಮೂರು ಬೋನುಗಳನ್ನು ಮಾತ್ರ ನೀಡಿದೆ. ಆದರೆ ಬಫರ್ ವಲಯದಲ್ಲಿ ಇರುವ 2 ಬೋನುಗಳನ್ನು ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಲ್ಲಿ ಮಾತ್ರ ಅಳವಡಿಸುತ್ತಿದೆ. ಚಾಲಾಕಿ ಚಿರತೆಗಳು ಬೋನಿನತ್ತ ಸುಳಿಯದೆ ಅರಣ್ಯ ಇಲಾಖೆಯನ್ನು ಸತಾಯಿಸುತ್ತಿವೆ. ಆದರೆ ಚಿರತೆಯ ಇರುವಿಕೆ ಕಂಡ ಕೂಡಲೇ ಎಲ್ಲರೂ ಬೋನು ಇಡುವಂತೆ ಒತ್ತಾಯಿಸುತ್ತಿದ್ದಾರೆ. ಬೋನು ಇಟ್ಟಿರುವ ಪ್ರದೇಶಗಳ ಜನರು ಚಿರತೆ ಸೆರೆಯಾಗುವವರೆಗೂ ತೆಗೆಯದಂತೆ ಪಟ್ಟುಹಿಡಿಯುತ್ತಿರುವುದು ಅರಣ್ಯ ಇಲಾಖೆಗೆ ಸವಾಲಾಗುತ್ತಿದೆ.
ಬಫರ್ ವಲಯದಲ್ಲಿ ಕೇವಲ ಎರಡು ಬೋನುಗಳಿದ್ದು, ಇನ್ನೂ ಹೆಚ್ಚಿನ ಬೋನುಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಚಿರತೆಗಳ ದಾಳಿ ಪ್ರದೇಶಗಳಲ್ಲಿ ರಾತ್ರಿ ವೇಳೆ ಗಸ್ತು ನಡೆಸಲು ಆರ್‌ಎಫ್‌ಒ ನೇತೃತ್ವದ ತಂಡ ರಚಿಸಲಾಗಿದ್ದು, ಸಾರ್ವಜನಿಕರಿಂದ ದೂರು ಬಂದ ಕೂಡಲೇ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಜಾನುವಾರು ಸಾವಿಗೆ ಶೀಘ್ರವೇ ಪರಿಹಾರ ಕೊಡಲಾಗುತ್ತಿದೆ.
ಸಿ.ರವೀಂದ್ರ, ಎಸಿಎಫ್ ಗುಂಡ್ಲುಪೇಟೆ ಉಪವಿಭಾಗ