

ಶಿವು ತೂಬಗೆರೆ
ಚಿರತೆಗಳು ತಿಂಗಳಿಂದ ತೂಬಗೆರೆ ಹೋಬಳಿಯ ಹೀರೆಮುದ್ದೇನಹಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿವೆ. 20ಕ್ಕೂ ಹೆಚ್ಚು ಮೇಕೆ, ಹತ್ತಾರು ನಾಯಿಗಳನ್ನು ಬಲಿಪಡೆದಿರುವ ಚಿರತೆಗಳು ಮನುಷ್ಯರ ಮೇಲೂ ದಾಳಿ ನಡೆಸಬಹುದು ಎಂಬ ಆತಂಕ ಮನೆಮಾಡಿದೆ.
ಹೀರೆಮುದ್ದೇನಹಳ್ಳಿ ಗ್ರಾಮ ಸುಮಾರು 200 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಈ ಅರಣ್ಯದಲ್ಲಿ ಹಿಂದಿನಿಂದಲೂ ಸಾಕಷ್ಟು ಚಿರತೆಗಳಿವೆ ಎನ್ನಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಗ್ರಾಮಗಳ ಅಂಚಿನಲ್ಲಿ ಚಿರತೆಗಳ ಸಂಚಾರ ಶುರುವಾಗಿದೆ. ಅದೂ ಹಗಲಿನ ವೇಳೆಯಲ್ಲಿಯೇ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.
ಸದ್ಯ ರೈತರಾದ ನರಸಮ್ಮ, ಪ್ರಕಾಶ್, ಗಂಗಿರೆಡ್ಡಿ, ಅನಿಲ, ಯರಪ್ಪ, ಪಿಳ್ಳಪ್ಪ ಅವರು ಸಾಕಿದ್ದ ಸಾಕಷ್ಟು ಮೇಕೆಗಳು ಚಿರತೆ ದಾಳಿಯಿಂದ ಸಾವನ್ನಪ್ಪಿವೆ.
ಮೇವು ಅರಸಿ ಹೊರಟರೆ ಬಲಿ: ಮೇವಿಗಾಗಿ ಕಾಡಂಚಿನತ್ತ ಜಾನುವಾರುಗಳನ್ನು ಕರೆದೊಯ್ಯುವ ರೈತರು ಚಿರತೆ ಹಾವಳಿಗೆ ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ದನಕರುಗಳ ಹಿಂಡಿನ ಮೇಲೆ ದಾಳಿ ಮಾಡುವ ಚಿರತೆಗಳು ರೈತರ ಕಣ್ಣೆದುರೇ ಕರುಗಳನ್ನು ಕಚ್ಚಿಕೊಂಡು ಹೋಗುವ ದೃಶ್ಯ ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ಬೆಚ್ಚಿಬಿದ್ದಿರುವ ರೈತರು ಕಾಡಂಚಿನತ್ತ ಕಾಲಿಡಲು ಭಯಬೀಳುತ್ತಿದ್ದಾರೆ.
ಬೋನಿಗೆ ಬೀಳದ ಚಿರತೆ: ಚಿರತೆ ಹೆಚ್ಚು ಕಾಣಿಸಿಕೊಳ್ಳುವ ಸ್ಥಳದಲ್ಲಿ ಅರಣ್ಯ ಇಲಾಖೆ ಬೋನಿಟ್ಟು ಸೆರೆಗೆ ಕಾರ್ಯಾಚರಣೆ ರೂಪಿಸಿದೆ, ಆದರೆ ಇದುವರೆಗೆ ಚಿರತೆ ಬೋನಿನತ್ತ ಕಾಲಿಟ್ಟಿಲ್ಲ. ಚಿರತೆ ಒಂದೇ ಇದೆಯೋ ಅಥವಾ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದೋ ತಿಳಿಯದ ಗ್ರಾಮಸ್ಥರು ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳುವಂತಾಗಿದೆ.
ಅರಣ್ಯ ಇಲಾಖೆ ಹೇಳೋದೇನು?: ಚಿರತೆ ಸೆರೆಗೆ ಬೋನಿಟ್ಟು ಕಾರ್ಯಾಚರಣೆ ರೂಪಿಸಲಾಗಿದೆ, ಆದರೆ ಬೋನಿನ ಆಸುಪಾಸಿನಲ್ಲೇ ಓಡಾಡುವುದರಿಂದ ಚಿರತೆ ಅತ್ತ ಕಡೆ ಸುಳಿಯುವುದಿಲ್ಲ, ಅಲ್ಲದೆ ಕಾಡಂಚಿನಲ್ಲಿ ಜಾನುವಾರು ಮೇಯಿಸಲು ಹೋಗುವುದರಿಂದ ಚಿರತೆಗಳು ಸುಲಭವಾಗಿ ಬೇಟೆ ದಕ್ಕಿಸಿಕೊಳ್ಳುತ್ತವೆ. ಆದ್ದರಿಂದ ಚಿರತೆ ಸೆರೆ ಸಿಗುವವರೆಗೆ ರೈತರು ಕಾಡಂಚಿನ ಕಡೆ ಸುಳಿಯಬಾರದು, ಇಲ್ಲವಾದರೆ ಚಿರತೆ ಸೆರೆ ಕಷ್ಟಸಾಧ್ಯ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಕಾರ್ಯಾಚರಣೆ ಮುಂದುವರಿದಿದ್ದು ಸದ್ಯದಲ್ಲೇ ಚಿರತೆಗಳನ್ನು ಸೆರೆಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿರತೆ ಹಾವಳಿ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ, ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ, ಈಗಾಗಲೇ ಒಂದು ಕಡೆ ಬೋನು ಇಟ್ಟು ಚಿರತೆ ಸೆರೆಹಿಡಿಯುವ ಪ್ರಯತ್ನ ನಡೆಯುತ್ತಿದೆ, ಮತ್ತೆ ಇನ್ನೆರಡು ಕಡೆ ಬೋನು ಇಡುವಂತೆ ಸೂಚನೆ ನೀಡಿದ್ದೇನೆ, ನಿಸರ್ಗ ನಾರಾಯಣಸ್ವಾಮಿ, ಶಾಸಕ ದೇವನಹಳ್ಳಿ ಚಿರತೆ ಸೆರೆಗೆ ಬೋನು ಇಟ್ಟು ಕಾರ್ಯಾಚರಣೆ ರೂಪಿಸಲಾಗಿದೆ, ಪ್ರಸ್ತುತ ಕಾಡಂಚಿನಲ್ಲಿ ರೈತರು ಜಾನುವಾರು ಮೇಯಿಸಲು ಹೋದಾಗ ಕರು, ಮೇಕೆ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿರುವುದು ಗೊತ್ತಾಗಿದೆ, ಚಿರತೆ ಸೆರೆಗೆ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗಿದೆ, ಸಾರ್ವಜನಿಕರು ಕಾಡಂಚಿನತ್ತ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು. ಮುನಿರಾಜು, ವಲಯ ಅರಣ್ಯಾಧಿಕಾರಿ ಹಗಲಿನ ವೇಳೆಯೇ ಚಿರತೆಗಳು ದಾಳಿ ಮಾಡುತ್ತಿವೆ. ಕರು, ಮೇಕೆ, ಕುರಿ ನಾಯಿಗಳನ್ನು ಸ್ವಾಹ ಮಾಡುತ್ತಿದೆ, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಚಿರತೆ ಹಾವಳಿ ತಪ್ಪಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಮನುಷ್ಯರೂ ಚಿರತೆ ಬಾಯಿಗೆ ಆಹಾರವಾಗುವ ಆತಂಕವಿದೆ. ಅಂಬರೀಶ, ಗ್ರಾಮಸ್ಥ