ಚಿರತೆ ಸೆರೆಗೆ ಶೀಘ್ರ ಕ್ರಮ ವಹಿಸಿ : ಸಚಿವ ಎಸ್.ಟಿ. ಸೋಮಶೇಖರ್ ನಿರ್ದೇಶನ

s.t.somashekhar
Published on

ಮೈಸೂರು: ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಮತ್ತೆ ಜೀವ ಹಾನಿ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸುವ ಜತೆಗೆ ಚಿರತೆಯನ್ನು ಶೀಘ್ರ ಸೆರೆ ಹಿಡಿಯಲು ಎಲ್ಲ ರೀತಿಯ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಿ.ನರಸೀಪುರ ತಾಲೂಕಿನಲ್ಲಿ ಜನರ ಭೀತಿಗೆ ಕಾರಣವಾಗಿರುವ ಚಿರತೆ ಸೆರೆ ಹಿಡಿಯುವ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕೈಗೊಳ್ಳುವ ಕಾರ್ಯಾಚರಣೆಯಿಂದ ಜನರಲ್ಲಿರುವ ಭಯ ದೂರವಾಗಬೇಕು. ನಿಮಗೆ ಎಲ್ಲ ರೀತಿಯ ನೆರವು ನೀಡಲು ಜಿಲ್ಲಾಡಳಿತ, ಸರ್ಕಾರ ಸಿದ್ಧವಿದೆ. ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿಯ ಸಂಖ್ಯೆಯನ್ನು 25 ರಿಂದ 158ಕ್ಕೆ ಏರಿಸಲಾಗಿದೆ. ಸೆರೆ ಹಿಡಿಯುವ ಚಿರತೆಗಳನ್ನು ಒಂದು ವರ್ಷದವರೆಗೆ ಮತ್ತೆ ಅರಣ್ಯಕ್ಕೆ ಬಿಡದೆ ಪುನರ್ವಸತಿ ಕೇಂದ್ರದಲ್ಲಿ ಇಡಬೇಕು ಎಂದು ಸೂಚನೆ ನೀಡಿದರು.

ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ತಿ.ನರಸೀಪುರ ತಾಲೂಕಿನಲ್ಲಿ ಬೀದಿ ನಾಯಿಗಳಿಗಿಂತ ಚಿರತೆಗಳು ಹೆಚ್ಚು ಇವೆ. ಸೆರೆ ಹಿಡಿದ ಚಿರತೆಗಳನ್ನು ಎಲ್ಲಿ ಬಿಡಲಾಗಿದೆ? ಅವುಗಳಿಗೆ ಜಿಪಿಎಸ್ ಅಳವಡಿಸಲಾಗಿದೆಯೇ ಎಂಬ ಕುರಿತು ಅರಣ್ಯ ಇಲಾಖೆ ಮಾಹಿತಿ ನೀಡುತ್ತಿಲ್ಲ. ರಾಜ್ಯದ ವಿವಿಧೆಡೆ ಇರುವ ಅರಣ್ಯ ಇಲಾಖೆಯ ನುರಿತ ಶೂಟರ್ಸ್‌ಗಳನ್ನು ಕರೆಯಿಸಿಕೊಂಡು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಚಿರತೆ ಹಾವಳಿ ಕಂಡು ಬರುತ್ತಿರುವ ಪ್ರದೇಶಗಳಿಗೆ ರಾತ್ರಿ ನಿರಂತರ ವಿದ್ಯುತ್ ಪೂರೈಸಬೇಕು. ಆ ಭಾಗದಲ್ಲಿ ಜನರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಗ್ರಾಮ ಪಂಚಾಯಿತಿಗಳು ಬೀದಿ ದೀಪ ಅಳವಡಿಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಕೆಲವರು ಹೂಡಿಕೆ ದೃಷ್ಟಿಯಿಂದ ಕೃಷಿ ಭೂಮಿ ಖರೀದಿಸಿ ಪಾಳುಬಿಟ್ಟಿದ್ದು, ಜಮೀನುಗಳಲ್ಲಿ ಕಾಡು ಬೆಳೆದುಕೊಂಡಿದೆ. ಅಂತಹ ಜಮೀನು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೈತರು ತಮ್ಮ ಜಮೀನು ಗಳಲ್ಲಿ ಕಾಡು ಬೆಳೆಸಿಕೊಂಡಿದ್ದರೆ ತಕ್ಷಣ ಕಡಿಯಲು ಕ್ರಮ ವಹಿಸಬೇಕು ಎಂದು ಹೇಳಿದರು.

ಡಿಸಿಎಫ್ ಮಹೇಶ್ ಮಾತನಾಡಿ, ಚಿರತೆ ಟಾಸ್ಕ್‌ಫೋರ್ಸ್ ರಚನೆಯ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಟಾಸ್ಕ್‌ಫೋರ್ಸ್ ಗೆ ಏನೆಲ್ಲ ಅವಶ್ಯಕತೆ ಇದೆ ಎಂಬ ಪಟ್ಟಿ ಮಾಡಲಾಗಿದ್ದು, ಒಟ್ಟು 3 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಚಿರತೆ ಸೆರೆಗೆ ಒಂದು ಥರ್ಮಲ್ ಡ್ರೋಣ್ ಬಳಸಲಾಗುತ್ತಿದ್ದು, ಮತ್ತೊಂದಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.

ತಿ.ನರಸೀಪುರ ತಾಲೂಕಿನಲ್ಲಿ 21 ಗ್ರಾಮಗಳನ್ನು ಚಿರತೆ ಸಂಘರ್ಷ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದ್ದು, ಒಟ್ಟು 19 ಕಡೆಗಳಲ್ಲಿ ಬೋನು ಇರಿಸಲಾಗಿದೆ. ಕಳೆದ 3 ತಿಂಗಳಿನಲ್ಲಿ ತಿ.ನರಸೀಪುರ ಭಾಗದಲ್ಲಿ 3 ಚಿರತೆ ಹಾಗೂ 5 ಮರಿಗಳನ್ನು ರಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ 63 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಡಿಸಿಎಫ್ ಡಾ. ಕೆ.ಎಂ. ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net