ಚಿರತೆ ಸೆರೆಗೆ ಗಂಗನದೊಡ್ಡಿ ಗ್ರಾಮಸ್ಥರ ಆಗ್ರಹ

26 HANUR 3
Published on

ಹನೂರು: ಕಳೆದ ಎರಡು ತಿಂಗಳಿನಿಂದಲೂ ಹಾವಳಿ ಮಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ತಾಲೂಕಿನ ಅಜ್ಜೀಪುರ ಸಮೀಪದ ಗಂಗನದೊಡ್ಡಿ ಭಾಗದ ರೈತ ಮುಖಂಡರು ವಲಯ ಅರಣ್ಯಾಧಿಕಾರಿ ಪ್ರವೀಣ್ ಅವರನ್ನು ಒತ್ತಾಯಿಸಿದರು.

ಗಂಗನದೊಡ್ಡಿ ಗ್ರಾಮದ ಭೈರಪ್ಪ ಎಂಬುವರ ಮನೆಯ ಬಳಿ ಬುಧವಾರ ರಾತ್ರಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಗುರುವಾರ ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳ ಜತೆ ಮಾತನಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಈ ಭಾಗದಲ್ಲಿ ಕಳೆದ 2 ತಿಂಗಳಿನಿಂದಲೂ ಚಿರತೆಯ ಹಾವಳಿ ವಿಪರೀತವಾಗಿದ್ದು, ದಾಳಿ ನಡೆಸಿ ನಾಲ್ಕೈದು ಮೇಕೆಗಳನ್ನು ಕೊಂದು ಹಾಕಿದೆ. ಬೋನಿ ಇಟ್ಟರೂ ಚಿರತೆ ಬೋನಿಗೆ ಬೀಳುತ್ತಿಲ್ಲ. ಇದೀಗ ರಾತ್ರಿ ಗ್ರಾಮದ ಮನೆಯೊಂದರ ಗೇಟ್ ಬಳಿ ಚಿರತೆ ಆಗಮಿಸಿದ್ದು, ಜನರು ಭಯಭೀತರಾಗಿದ್ದಾರೆ. ಜೀವಭಯದ ಆತಂಕ ಮನೆ ಮಾಡಿದೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಈ ಬಗ್ಗೆ ಕೂಡಲೇ ಮುತುವರ್ಜಿ ವಹಿಸಿ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಆರ್‌ಎಫ್‌ಒ ಪ್ರವೀಣ್ ಪ್ರತಿಕ್ರಿಯಿಸಿ, ಡ್ರೋನ್ ಕ್ಯಾಮರಾದ ಮೂಲಕ ಚಿರತೆಯನ್ನು ಪತ್ತೆಹಚ್ಚಿ ಆಯಕಟ್ಟಿನ ಸ್ಥಳದಲ್ಲಿ ಬೋನು ಇರಿಸಲಾಗುವುದು. ಜತೆಗೆ ರಾತ್ರಿ ವೇಳೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಚಿರತೆ ಸೆರೆಗೆ ಅಗತ್ಯ ಕ್ರಮವಹಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್‌ಗೌಡ, ಗ್ರಾಮ ಘಟಕದ ಅಧ್ಯಕ್ಷ ಶಿವಲಿಂಗ, ರೈತ ಮುಖಂಡರಾದ ಭೈರೇಗೌಡ, ರಮೇಶ್, ಬಸವಲಿಂಗಯ್ಯ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net