ಚಿರತೆ ಸೆರೆಗೆ ಕಾರ್ಯಾಚರಣೆ ಚುರುಕು, ಕಂಡಲ್ಲಿ ಗುಂಡಿಕ್ಕಲು ಆದೇಶ

IMG-20230123-WA0005
Published on

ಮೈಸೂರು; ತಿ.ನರಸೀಪುರ ತಾಲೂಕಿನಲ್ಲಿ ನಾಲ್ವರನ್ನು ಬಲಿ ಪಡೆದ ಚಿರತೆ ಸೆರೆಗೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.


ಚಿರತೆಗೆ ಕಂಡಲ್ಲಿ ಗುಂಡಿಕ್ಕುವಂತೆ ಆದೇಶಿಸಲಾಗಿದ್ದು, ಗೂಗಲ್ ಮ್ಯಾಪ್ ತಂತ್ರಜ್ಞಾನದಿಂದ ವಿವಿಧೆಡೆ ಕ್ಯಾಮರಾ ಟ್ರಾೃಪ್ ಅಳವಡಿಸಿ ಚಿರತೆಯ ಸುಳಿವು ಪತ್ತೆಹಚ್ಚಲು ಸಹ ಅರಣ್ಯ ಇಲಾಖೆ ಮುಂದಾಗಿದೆ.
120ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ವಿವಿಧೆಡೆ ಬೋನಿಡಲಾಗಿದೆ. ಸ್ಥಳದಲ್ಲೇ ಇಬ್ಬರು ಪಶುವೈದ್ಯರು ಇರುವ ಅರಿವಳಿಕೆ ತಜ್ಞರ ತಂಡವನ್ನು ನಿಯೋಜಿಸಲಾಗಿದೆ. ಜನರಲ್ಲಿ ಸಂಜೆ ವೇಳೆ ಮನೆಯಿಂದ ಹೊರಬರದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಮೈಸೂರು ವೃತ್ತದ ಸಿಎಫ್ ಡಾ.ಮಾಲತಿ ಪ್ರಿಯಾ ತಿಳಿಸಿದ್ದಾರೆ.


ಚಿರತೆ ಚಹರೆ ಪತ್ತೆಗೆ ಸೂಚನೆ ನೀಡಲಾಗಿದೆ. ಇದರಿಂದ ಸಿದ್ದಮ್ಮ ಬಲಿಯಾದ ಸ್ಥಳದ ಸುತ್ತಮುತ್ತ 12 ಕ್ಯಾಮರಾ ಟ್ರ್ಯಾಪ್, ಜಯಂತ್ ಮೃತದೇಹ ಸಿಕ್ಕಿದ ಸ್ಥಳದ ಸುತ್ತಮುತ್ತ 4 ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದೆ.


ಇದರೊಂದಿಗೆ 5-6 ಬೋನಿಡಲಾಗಿದೆ. ಮಲ್ಲಿಕಾರ್ಜುನ ಬೆಟ್ಟದ ಚಿರತೆ ಸೆರೆ ಹಿಡಿಯಲು ಅನುಸರಿಸಿದಂತೆ ತುಮಕೂರಿನಿಂದ ದೊಡ್ಡ ಬೋನು ತಂದು ಅದನ್ನು ಕೊಟ್ಟಿಗೆ ಮಾದರಿಯಲ್ಲಿ ಹುಲ್ಲು, ಸೊಪ್ಪಿನಿಂದ ಮುಚ್ಚಿ ಚಿರತೆಯನ್ನು ಸೆಳೆಯಲು ಕ್ರಮ ವಹಿಸಲಾಗಿದೆ. ಜತೆಗೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ದಾಳಿಗೆ ಬಲಿಯಾದ ಹಸು, ಕರುವಿನ ಮೃತದೇಹವನ್ನು ಕೊಟ್ಟಿಗೆ ಮಾದರಿಯ ಬೋನಿಲ್ಲಿಟ್ಟು ಸೆರೆ ಹಿಡಿಯಲು ಮುಂದಾಗಿದೆ.


ಕಳೆದ 3 ತಿಂಗಳಲ್ಲೇ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದು, ತಿ.ನರಸೀಪುರ ತಾಲೂಕಿನ ಜನರನ್ನು ಆತಂಕಗೊಂಡಿದ್ದಾರೆ. ಮೇಲಿಂದ ಮೇಲೆ ದಾಳಿ ನಡೆಸಿ ಕಣ್ಮರೆಯಾಗುತ್ತಿರುವ ಚಿರತೆಯಿಂದಾಗಿ ಅರಣ್ಯ ಇಲಾಖೆ ಒತ್ತಡಕ್ಕೆ ಸಿಲುಕಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿರತೆ ಸೆರೆಗೆ ವಿಶೇಷ ಕಾರ್ಯಪಡೆ ರಚಿಸುವಂತೆ ಸೂಚಿಸಿದ್ದಾರೆ.

ಜನರ ಆಕ್ರೋಶ ಶಮನ ಮಾಡಲು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಪಿಸಿಸಿಎಫ್(ವನ್ಯಜೀವಿ) ಅವರೊಂದಿಗೆ ಚರ್ಚಿಸಿದ್ದಾರೆ. ಚಿರತೆಗೆ ಕಂಡಲ್ಲಿ ಗುಂಡಿಕ್ಕುವಂತೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಸೆರೆಗೆ ಶ್ರಮಿಸುತ್ತಿದ್ದು, ವಿವಿಧ ತಂತ್ರಗಾರಿಕೆ ಮೂಲಕ ಕಾರ್ಯಾಚರಣೆ ಮುಂದುವರಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net