ಹನೂರು : ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಹುಣಸೆಪಾಳ್ಯ ಗ್ರಾಮದ ಜಮೀನೊಂದರಲ್ಲಿ ಸೋಮವಾರ ಚಿರತೆ ದಾಳಿಗೆ ಹಸುವೊಂದು ಬಲಿಯಾಗಿದೆ. ಸಮೀಪದ ಕಾನ್‌ಮಳೆ ದೊಡ್ಡಿಯ ಜಡೇರುದ್ರ ಎಂಬುವರು ಜಯಪ್ಪ ಎಂಬುವರಿಗೆ ಸೇರಿದ ಪಾಳುಬಿದ್ದ ಜಮೀನಿನಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಚಿರತೆ ಹಾವಳಿಗೆ ಕಡಿವಾಣ ಹಾಕುವುದರ ಜತೆಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.