

ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ದಾಳಿಗೆ ಹಸು ಬಲಿಯಾಗಿದೆ.
ಗ್ರಾಮದ ಮಹದೇವಮ್ಮ ಅವರ ಮನೆ ಹಿತ್ತಲಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಸುವಿನ ಮೇಲೆ ದಾಳಿ ನಡೆಸಿರುವ ಚಿರತೆ ಕೊಂದು ಹಾಕಿ ಎಳೆದೊಯ್ದು ಹೊಟ್ಟೆ ಭಾಗವನ್ನು ಸಂಪೂರ್ಣ ತಿಂದು ಹಾಕಿದೆ. ಬೆಳಗ್ಗೆ ಎಂದಿನಂತೆ ಹಸುವಿಗೆ ಮೇವು ಹಾಕಲು ಕೊಟ್ಟಿಗೆಗೆ ತೆರಳಿದಾಗ ಹಸು ಇರಲಿಲ್ಲ. ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಹುಡುಕಾಡಿದಾಗ ಹಸುವಿನ ಕಳೇಬರ ಕಂಡುಬಂದಿದೆ. ತಕ್ಷಣವೇ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ, ಲವಕುಮಾರ್, ಧನಂಜಯ ಹಾಗೂ ಸಿಬ್ಬಂದಿ ಹಸುವಿನ ಕಳೇಬರ ಪರೀಕ್ಷೆ ನಡೆಸಿದರು. ಚಿರತೆ ಸೆರೆಗಾಗಿ ಬೋನು ಇರಿಸಿದ್ದು, ಹಸುವಿನ ಕಳೇಬರ ಕಾಲುಗಳನ್ನು ಕತ್ತರಿಸಿ ಇಡಲಾಗಿದೆ.