ಮಳವಳ್ಳಿ: ತಾಲೂಕಿನ ವಿವಿಧೆಡೆಗಳಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ ಮೇಕೆ ಮತ್ತು ನಾಯಿಯೊಂದು ಬಲಿಯಾಗಿವೆ. ಬೆಳಕವಾಡಿ ಸಮೀಪದ ಎ.ಪಿ.ದೊಡ್ಡಿ ಗ್ರಾಮದ ಮಹದೇವು ಎಂಬುವರ ಮನೆಯ ಹಿಂಭಾಗದ ಕೊಟ್ಟಿಗೆ ನುಗ್ಗಿದ ಚಿರತೆ ಮೇಕೆಯನ್ನು ಎಳೆದೊಯ್ದು ತಿಂದುಹಾಕಿದೆ. ಮತ್ತೊಂದೆಡೆ ಹೈನೋರ ಹುಂಡಿ ಬಳಿ ಇರುವ ಪಟ್ಟಣದ ಮಹೇಶ್ ಕುಮಾರ್ ಎಂಬುವರಿಗೆ ಸೇರಿದ ತೋಟದ ಮನೆಗೆಯಲ್ಲಿ ಸಾಕಿದ್ದ ನಾಯಿಯನ್ನು ಭೇಟೆಯಾಡಿದ ಚಿರತೆ ತಲೆಭಾಗವನ್ನು ಹೊರತುಪಡಿಸಿ ಸಂಪೂರ್ಣವಾಗಿ ತಿಂದು ಪರಾರಿಯಾಗಿದೆ. ಪ್ರತ್ಯೇಕವಾಗಿ ನಡೆದಿರುವ ಚಿರತೆಗಳ ದಾಳಿಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಚಿರತೆ ಸೆರೆಗೆ ಸೂಕ್ತ ಕ್ರಮ ವಹಿಸುವುದಾಗಿ ರೈತರಿಗೆ ಭರವಸೆ ನೀಡಿ ವರದಿ ಪಡೆದು ತೆರಳಿದ್ದಾರೆ ಎನ್ನಲಾಗಿದೆ.
ಒಂದೇ ರಾತ್ರಿಯಲ್ಲಿ ಚಿರತೆ ದಾಳಿಯ ಎರಡು ಪ್ರಕರಣಗಳು ನಡೆದಿರುವುದರಿಂದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ನಾಯಿ ಮಾಲೀಕ ಮಹೇಶ್ ಕುಮಾರ್‌ಮಾತನಾಡಿ, ಚಿರತೆಗಳ ಉಪಟಳದಿಂದ ಹಳ್ಳಿಗಾಡಿನ ಜನರು ಭಯದಿಂದ ಬದುಕುವಂತಾಗಿದೆ. ಇತ್ತೀಚೆಗೆ ಈ ಭಾಗದಲ್ಲಿ ಪ್ರತಿದಿನ ಚಿರತೆಗಳು ಕಾಳಿಸಿಕೊಳ್ಳುತ್ತಿರುವುದರ ಜತೆಗೆ ಸಾಕುಪ್ರಾಣಿಗಳನ್ನು ತಿಂದು ಹಾಕುತ್ತಿವೆ. ನಮ್ಮ ಜಮೀನಿನ ಪಕ್ಕದಲ್ಲೇ ಇರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜನಸಾಮಾನ್ಯರ ಜೀವದ ಜತೆ ಚಲ್ಲಾಟವಾಡದೇ ಚಿರತೆಗಳ ಹಾವಳಿ ಅತ್ತಿಕ್ಕಲು ಅರಣ್ಯ ಇಲಾಖೆ ಗಂಭೀರವಾದ ಚಿಂತನೆ ನಡೆಸಿ ಕ್ರಮವಹಿಸುವಂತೆ ಆಗ್ರಹಿಸಿದರು.