

ಮಳವಳ್ಳಿ: ತಾಲೂಕಿನ ಬೆಳಕವಾಡಿ ಸಮೀಪದ ಹೊನಗಹಳ್ಳಿ ಗ್ರಾಮದ ಬಳಿ ಮಂಗಳವಾರ ಚಿರತೆ ದಾಳಿಗೆ ಎರಡು ಮೇಕೆ ಬಲಿಯಾಗಿವೆ.
ಗ್ರಾಮದ ಮಹೇಶ್ ಅವರು ಜಮೀನಿನಲ್ಲಿ ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿದೆ. ಇದನ್ನು ಕಂಡ ಕುರಿಗಾಯಿ ಭಯಗೊಂಡು ಗ್ರಾಮದ ಕಡೆ ಓಡಿ ಹೋಗಿ ಜನರನ್ನು ಕರೆತಂದಿದ್ದಾನೆ. ಅಷ್ಟರಲ್ಲಾಗಲೇ ಗುಂಪಿನಲ್ಲಿದ್ದ ಮೇಕೆಯೊಂದನ್ನು ಕೊಂದಿದ್ದ ಚಿರತೆ, ಮತ್ತೊಂದು ಮೇಕೆಯನ್ನು ಎಳೆದೊಯ್ದಿದೆ. ಘಟನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಈ ಭಾಗದಲ್ಲಿ ಚಿರತೆ ಪದೇ ಪದೆ ಕಾಣಿಸಿಕೊಳ್ಳುವ ಜತೆಗೆ ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇದರಿಂದ ರೈತರು ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಚಿರತೆ ಸೆರೆಗೆ ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ವೀಕ್ಷಕ ಮನೋಹರ್, ಕೂಡಲೇ ಚಿರತೆ ಸೆರೆಗೆ ಬೋನು ಇರಿಸುವ ಜತೆಗೆ, ರಾತ್ರಿ ಪಾಳಿಯಲ್ಲಿ ಗಸ್ತು ಹೆಚ್ಚಿಸುವುದಾಗಿ ಭರವಸೆ ನೀಡಿದರು.