

ಹನೂರು: ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಬುಧವಾರ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಿಸಿಎಫ್ ಮಾಲತಿಪ್ರಿಯ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಅವರು ಬಾಲಕಿಯ ಕುಟುಂಬಸ್ಥರು ಹಾಗೂ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಚಿರತೆ ಸೆರೆ ಹಿಡಿಯಲು ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ರಾತ್ರಿ ವೇಳೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಅರಣ್ಯದಂಚಿಗೆ ಹೊಂದಿಕೊಂಡಂತಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅವರು, ಶಿಕ್ಷಕರಿಂದ ಮಾಹಿತಿ ಪಡೆದರು. ಈ ವೇಳೆ ಶಿಕ್ಷಕ ಟಿ.ಲೋಕೇಶ್ ಶಾಲಾ ಕಾಂಪೌಂಡ್ ಇಲ್ಲದಿರುವುದರ ಬಗ್ಗೆ ಗಮನಕ್ಕೆ ತಂದರು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗೊಂದಿಗೆ ಚರ್ಚಿಸಿ ಕಾಂಪೌಂಡ್ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಿಸಿಎಫ್ ಭರವಸೆ ನೀಡಿದರು.
ಇದೇ ವೇಳೆ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಲಾಗುವುದು. ಯಾವುದೇ ರೀತಿಯಲ್ಲೂ ಭಯ ಪಡಬಾರದು ಎಂದು ಮಕ್ಕಳಿಗೆ ಧೈರ್ಯ ಹೇಳಿದ ಮಾಲತಿಪ್ರಿಯ ಗ್ರಾಮಸ್ಥರಿಗೆ ಚಿರತೆ ಸೆರೆ ಹಿಡಿಯುವವರೆಗೂ ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಡಿಸಿಎಫ್ ಡಾ.ದೀಪ ಕಂಟ್ರಾಕ್ಟರ್, ಎಸಿಎಫ್ ಮಹದೇವಯ್ಯ, ಆರ್‌ಎಫ್‌ಒ ವಾಸು, ಇತರರು ಇದ್ದರು.