ಚಿರತೆ ಉಗುರು, ಹಲ್ಲು ಸಾಗಿಸುತ್ತಿದ್ದವರ ಬಂಧನ

21 HANUR 3 A
-ಚಿರತೆ ಉಗುರು ಹಾಗೂ ಹಲ್ಲುಗಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದರು. -ವಶಪಡಿಸಿಕೊಂಡು ಚಿರತೆಯ ಉಗುರು ಹಾಗೂ ಹಲ್ಲುಗಳು.
Published on

ಹನೂರು: ಚಿರತೆ ಉಗುರು ಹಾಗೂ ಹಲ್ಲುಗಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಮೂವರನ್ನು ಮೈಸೂರು ಅರಣ್ಯ ಸಂಚಾರಿ ದಳ ಬಂಧಿಸಿದೆ.
ತಮಿಳುನಾಡಿನ ಭವಾನಿ ತಾಲೂಕಿನ ಜವರಯ್ಯ (52), ಕೆಂಪ (42), ತಮ್ಮಯ್ಯ (45) ಬಂಧಿತರು. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಈ ನಾಲ್ವರು ಚಿರತೆ ಹಾಗೂ ಹಲ್ಲುಗಳನ್ನು ಮಾರಾಟ ಮಾಡಲು ಶನಿವಾರ ತಾಲೂಕಿನ ಹೂಗ್ಯಂ ಭಾಗಕ್ಕೆ ಬಂದಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮೈಸೂರು ಅರಣ್ಯ ಸಂಚಾರಿ ದಳದ ಅರಣ್ಯ ಉಪ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್, ಎಸಿಎಫ್ ನಾಗರಾಜು, ಆರ್‌ಎಫ್‌ಒ ವಿವೇಕ್ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಜಲ್ಲಿಪಾಳ್ಯ- ಹೂಗ್ಯಂ ಮಾರ್ಗಮಧ್ಯೆ ಸಿಕ್ಕಿಬಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 18 ಉಗುರು ಹಾಗೂ 8 ಹಲ್ಲುಗಳನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net