ಚಿರಡೋಣಿ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ

IMG-20240113-WA0022.jpg
Published on

ದಾವಣಗೆರೆ: ಅರಣ್ಯ, ಕೆರೆಗಳು ನಮ್ಮ ಸಂಪತ್ತು. ಇವುಗಳ ಸಂರಕ್ಷಣೆಯ ಎಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಪಂ, ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೆರೆಯ ಹೂಳೆತ್ತಿ ನೀರು ಸಂಗ್ರಹಿಸಿದರೆ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದ ಬೋರ್‌ವೆಲ್ ಹೊಂದಿರುವ ರೈತರು ತರಕಾರಿ, ಅಡಕೆ, ತೆಂಗಿನ ತೋಟಗಳಿಗೆ ನೀರುಣಿಸಿ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಮಾಡುವುದು ನೆಮ್ಮಲ್ಲರ ಕರ್ತವ್ಯ ಎಂದು ಸಲಹೆ ನೀಡಿದರು.

ಪೂರ್ವಜರು ತಮ್ಮ ಹೊಲ ಗದ್ದೆಗಳಲ್ಲಿ ನೀರು ಸಂಗ್ರಹಿಸಲು ಒಡ್ಡುಗಳನ್ನು ಹಾಗೂ ಊರಿಗೊಂದು ಕೆರೆ ನಿರ್ಮಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನೀರನ್ನು ಸಂಗ್ರಹಿಸದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆರೆಗಳ ಹೂಳೆತ್ತಿ ನೀರು ಸಂಗ್ರಹಿಸುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ನೀಡುತ್ತಿರುವುದು ಗಮನಾರ್ಹ ಎಂದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಬಿ.ಮಲ್ಲಿಕಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಮಾ ಎಸ್.ಅಶೋಕ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net