ಚಿಮ್ಮಡ ಜಿಎಲ್‌ಬಿಸಿ ಕಾಲುವೆಗೆ ಉಪವಿಭಾಗಾಧಿಕಾರಿ ಭೇಟಿ

Chimmada, GLBC Canal, Sub Divisional Officer, Chimmada,
ಚಿಮ್ಮಡ ಜಿಎಲ್‌ಬಿಸಿ ಕಾಲುವೆಗೆ ಉಪ ವಿಭಾಗಾಧಿಕಾರಿ ಸಂತೋಷ ಕಾಮಡಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಾದ ಶ್ರೀಶೈಲ ಕಲ್ಯಾಣಿ, ಎಚ್.ಆರ್. ಮಹಾರಡ್ಡಿ ಇತರರಿದ್ದರು.
Published on

ಚಿಮ್ಮಡ: ಗ್ರಾಮದಲ್ಲಿ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆಯ ನಿಯಂತ್ರಣ ಕಚೇರಿಗೆ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಜಿಎಲ್‌ಬಿಸಿ ಕಾಲುವೆಗೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ದೇಶಕ್ಕಾಗಿ ಹತ್ತು ದಿನ ನೀರು ಹರಿಸಲಾಗುತ್ತಿದೆ. ಈಗಾಗಲೇ ಐದು ದಿನ ಮುಕ್ತಾಯಗೊಂಡಿದೆ.

ಆದರೆ ಇದುವರೆಗೆ ಬೀಳಗಿ ಭಾಗದ ಬಹುತೇಕ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಗ್ರಾಮದ ನಿಯಂತ್ರಣ ಕಚೇರಿಗೆ ಖುದ್ದು ಭೇಟಿ ನೀಡಿ ರಾತ್ರಿ 11.30 ರವರೆಗೆ ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು.

ಮಧುರಖಂಡಿ ಭಾಗದ ಹಲವು ರೈತರು ಜಮಖಂಡಿ ಕಾಲುವೆಗೆ ಹೆಚ್ಚುವರಿ ನೀರು ಹರಿಸುವಂತೆ ಸ್ಥಳೀಯ ನಿಯಂತ್ರಕರಿಗೆ ಒತ್ತಡಹಾಕಿ ನೀರು ಹರಿಸುತ್ತಿದ್ದರು. ಮುಧೋಳ ಭಾಗದ ರೈತರು ಉಪ ಕಾಲುವೆಗಳ ಗೇಟ್‌ಗಳನು ಒಡೆದು ನೀರನ್ನು ತಮ್ಮ ಜಮೀನುಗಳಿಗೆ ಹರಿಸುತ್ತಿರುವುದರಿಂದ ಬೀಳಗಿ ಭಾಗಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಮುಧೋಳ ಪ್ರಭಾರಿ ಕಾರ್ಯ ನಿರ್ವಾಹಕ ಇಂಜಿನಿಯರ್ ಎಚ್.ಆರ್. ಮಹಾರಡ್ಡಿ ಮಾಹಿತಿ ನೀಡಿದರು.

ಕುಡಿಯುವ ಉದ್ದೇಶಕ್ಕೆ ಅವಶ್ಯವಿರುವಷ್ಟು ನೀರನ್ನು ಮಾತ್ರ ಮುಧೋಳ ಹಾಗೂ ಜಮಖಂಡಿ ಕಾಲುವೆಗೆ ಹರಿಸುವಂತೆ ಆದೇಶಿಸಿದರು. ಗೇಟ್‌ಗಳನ್ನು ಒಡೆದು ಇಲಾಖೆಯ ಆಸ್ತಿಗಳಿಗೆ ಹಾನಿ ಮಾಡುವವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸುವಂತೆ ಜಮಖಂಡಿ, ಮುಧೋಳ ಕಾರ್ಯ ನಿರ್ವಾಹಕ ಇಂಜಿನಿಯರ್ ಆದೇಶಿಸಿದರು. ಹೆಚ್ಚುವರಿಯಾಗಿ ನೀರು ಪಡೆಯಲು ಬಂದಿದ್ದ ರೈತರಿಗೆ ತಿಳಿವಳಿಕೆ ನೀಡಿ ಕಳುಹಿಸಿದರು.

ಸ್ಥಳದಲ್ಲಿ ಜಮಖಂಡಿ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀಶೈಲ ಕಲ್ಯಾಣಿ, ಮುಧೋಳ ಪ್ರಭಾರಿ ಕಾರ್ಯ ನಿರ್ವಾಹಕ ಇಂಜಿನಿಯರ್ ಎಚ್.ಆರ್. ಮಹಾರಡ್ಡಿ, ಸಹಾಯಕ ಕಾರ್ಯಪಾಲಕ ಚೇತನ ಅಬ್ಬಿಗೇರಿ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಸದಾಶಿವ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net