

ಬೇಲೂರು: ತಾಲೂಕಿನ ಚಿನ್ನೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಗನೇಗೌಡ(ಸ್ವಾಮಿಗೌಡ) ಅವಿರೋಧವಾಗಿ ಆಯ್ಕೆಯಾದರು.
ಚಿನ್ನೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರೈತ ಮುಖಂಡ ಸಗನೇಗೌಡ(ಸ್ವಾಮಿಗೌಡ)ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಶಕ್ಕು ಅವರು ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಸಗನೇಗೌಡ ಮಾತನಾಡಿ, ರೈತ ಬೆಂಬಲಿತ ಸಹಕಾರ ಸಂಘಗಳಿಂದ ಮಾತ್ರ ರೈತರು ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ. ಈ ಭಾಗದ ರೈತರ ಅನುಕೂಲಕ್ಕಾಗಿ ಅಗತ್ಯ ಕ್ರಮ ಹಾಗೂ ಗೊಬ್ಬರದ ಕೊರತೆ ನೀಗಿಸುವ ಕೆಲಸ ಮಾಡಲಾಗುವುದು. ಸಿಕ್ಕ ಅಲ್ಪ ಅವಧಿಯಲ್ಲೇ ಸ್ವಂತ ಕಟ್ಟಡ ನಿರ್ಮಿಸಲು ಚಿಂತಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, 10 ವರ್ಷಗಳ ಹಿಂದೆ ಪ್ರಾರಂಭವಾದ ಇಲ್ಲಿನ ಸಹಕಾರ ಸಂಘ ಉತ್ತಮವಾಗಿ ನಡೆಯುತ್ತಿದೆ. ಈ ಹಿಂದೆ ಅಧ್ಯಕ್ಷರಾದವರು ಉತ್ತಮ ಕೆಲಸ ಮಾಡಿದ್ದಾರೆ. ಅದೇ ರೀತಿ ನೂತನ ಅಧ್ಯಕ್ಷ ಸ್ವಾಮಿಗೌಡ ಮತ್ತಷ್ಟು ಉತ್ತಮ ಕೆಲಸ ಮಾಡಲಿ ಎಂದರು.
ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್, ಮಾಜಿ ಅಧ್ಯಕ್ಷ ಕರ್ಕಿಹಳ್ಳಿ ರಮೇಶ್, ಸಂಘದ ಮಾಜಿ ಅಧ್ಯಕ್ಷ ಸಿ.ಎಚ್.ಮಹೇಶ್, ರೈತ ಸಂಘದ ಅಧ್ಯಕ್ಷ ಬೋಗ ಮಲ್ಲೇಶ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಲರಾಮ್, ಸದಸ್ಯರಾದ ಶಿವರಾಜ್, ನಾಗೇಶ್, ಸತ್ಯನಾರಾಯಣ್, ಮುಖಂಡರಾದ ಸಚಿನ್, ಧನಪಾಲ್, ಎಂ.ಕೆ.ಆರ್.ನಾಗೇಶ್ ಇತರರಿದ್ದರು.