ಚಿನ್ನಾಭರಣ ಮರಳಿಸಿ ವ್ಯಕ್ತಿ

25 MANJU 07
Published on

ಹೊಸಪೇಟೆ: ನಗರದಲ್ಲಿ ಬಂಗಾರದ ಆಭರಣ ಬ್ಯಾಗ್‌ನ್ನು ಕಳೆದುಕೊಂಡಿದ್ದ ಮಾಲಿಕ ಹಡಗಲಿಯ ಮುದುಕಪ್ಪ ಶೇಗಡಿ ಎಂಬವರಿಗೆ ತಾಲೂಕಿನ ಮಲಪನಗುಡಿ ನಿವಾಸಿ ರಾಘವೇಂದ್ರ ಎಂಬವರು ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣಗಳನ್ನು ಪರಿಶೀಲಿಸಿ ಎಎಸ್ಪಿ ಸಲೀಂ ಪಾಷಾ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಲಕ್ಷಾಂತರ ರೂ. ಮೌಲ್ಯದ 45 ಗ್ರಾಂ.,ನ ಚಿನ್ನದ ಸರ, ಕಿವಿಯೋಲೆ, ಉಂಗುರ ಮತ್ತು 80 ಗ್ರಾಂನ ಬೆಳ್ಳಿಯ ಕಡಗ, ದೇವಿಯ ಮೂರ್ತಿಯ ಆಭರಣಗಳಿದ್ದವು. ಈ ಬ್ಯಾಗ್ ಸಿಕ್ಕಿದ್ದ ರಾಘವೇಂದ್ರ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಈ ವೇಳೆ ರಾಘವೇಂದ್ರ ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಪೊಲೀಸರು ಸನ್ಮಾನಿಸಿ, ಸಿಹಿ ತಿನಿಸಿ ಅಭಿನಂದಿಸಿದರು. ಜತೆಯಲ್ಲಿದ್ದ ಒಡವೆಗಳ ಮಾಲೀಕರು ಮತ್ತು ಕುಟುಂಬದವರು ರಾಘವೇಂದ್ರ ಅವರಿಗೆ ಧನ್ಯವಾದ ತಿಳಿಸಿದರು.

ಹಡಗಲಿಯ ಮುದುಕಪ್ಪ ಶೇಗಡಿ ಎಂಬವರು ತಮ್ಮೂರಿನಿಂದ ಕೆಕೆಆರ್‌ಟಿಸಿ ಬಸ್ ನಲ್ಲಿ ನಗರದ ತಮ್ಮ ಪುತ್ರನ ಮನೆಗೆ ಬರುವಾಗ, ಇಲ್ಲಿನ ಎಪಿಎಂಸಿ ವೃತ್ತದಲ್ಲಿ ಇಳಿದಿದ್ದಾರೆ. ಆದರೆ, ತಮ್ಮ ಎರಡು ಬ್ಯಾಗ್‌ಗಳ ಪೈಕಿ ಒಂದನ್ನು ಬಿಟ್ಟಿದ್ದರು. ಈ ಬ್ಯಾಗ್ ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರೊಬ್ಬರು, ಅದೇ ವೇಳೆ ಅಲ್ಲಿಯೇ ಕೋರಿಯರ್ ಪಡೆಯಲು ಕಾಯುತ್ತಿದ್ದ ರಾಘವೇಂದ್ರ ಅವರಿಗೆ ನೀಡಿದ್ದಾರೆ. ಈ ವೇಳೆ ಅರ್ಧ ಗಂಟೆಗೂ ಅಧಿಕ ಕಾಲ ಅಲ್ಲೇ ಯಾರಾದರು ಬಂದರೆ ಹಿಂದಿರುಗಿಸಲು ಕಾದಿದ್ದಾರೆ. ಬಳಿಕ ಕೇಂದ್ರ ಬಸ್ ನಿಲ್ದಾಣದ ಬಳಿಗೂ ಬಂದಿದ್ದಾರೆ. ಆದರೆ, ಇವರು ಅಲ್ಲಿಂದ ತೆರಳಿದ ನಂತರ ಮಾಲಿಕರು ಅಲ್ಲಿಗೆ ಹೋಗಿದ್ದಾರೆ. ರಾತ್ರಿ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿ ಬಂಗಾರ ನೋಡಿದ ರಾಘವೇಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಪಟ್ಟಣ ಪೊಲೀಸ್ ಠಾಣೆಗೆ ಬಂದು ಬ್ಯಾಗ್ ಹಿಂದಿರುಗಿಸಿದ ಬಳಿಕ ಮಾಲಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net