ಶ್ರೀನಿವಾಸಪುರ: ಪಟ್ಟಣದ ಕೋರ್ಟ್ ಹಿಂಭಾಗದ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊಗಿಲಹಳ್ಳಿಯ ಚಾಲಕ ಎಂ.ಆರ್. ರಾಜು (27) ಬಂಧಿತ.
ಸೆ.18ರಂದು ಮೀನಾಕ್ಷಿ ಎಂಬುವರ ಮನೆಗೆ ಪರಿಚಿತ ಮೊಗಿಲಹಳ್ಳಿಯ ರಾಜು ಎಂಬಾತ ಮನೆಗೆ ಬಂದು ಮಾತನಾಡಿ, ಟೀ ಸೇವಿಸಿ ತೆರಳಿದ್ದ. ಬಳಿಕ ಮನೆಯಲ್ಲಿ ಪರಿಶೀಲಿಸಿದಾಗ 75 ಬಂಗಾರದ ಗುಂಡುಗಳು, ತಾಳಿ ಬೊಟ್ಟು, ಲಕ್ಷ್ಮೀಕಾಸು ಸೇರಿದಂತೆ ಒಟ್ಟು 30 ಗ್ರಾಂ ಚಿನ್ನಾಭರಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರಿನ ಆಧಾರದ ಮೇಲೆ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಚ್.ಸಿ. ಜಗದೀಶ್ ಹಾಗೂ ಮುಳಬಾಗಿಲು ಉಪವಿಭಾಗದ ಎಎಸ್‌ಪಿ ಮನೀಷಾ ನಿರ್ದೇಶನದಲ್ಲಿ ಶ್ರೀನಿವಾಸಪುರ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಶಂಕರಾಚಾರ್ ನೇತೃತ್ವದಲ್ಲಿ ರಚಿತವಾದ ತಂಡ 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಆಧುನಿಕ ತಾಂತ್ರಿಕ ವಿಧಾನ ಹಾಗೂ ಗುಪ್ತ ಮಾಹಿತಿ ಆಧರಿಸಿ ಭಾನುವಾರ ಹೆಬ್ಬಟ ಗ್ರಾಮದ ಕೆರೆ ಅಂಗಳದ ಸಮೀಪ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ರಾಜು ವಿರುದ್ಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮೊಕದ್ದಮೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.